ಬೆಳಗಾವಿ, ಜುಲೈ 14: ಗಂಡನ ಮನೆಯವರ ಸಾಲದ ಕಿರುಕುಳಕ್ಕೆ ಬೇಸತ್ತು ತಾಯಿ ಹಾಗೂ ಅವರ ಮೂರು ವರ್ಷದ ಮಗನೊಂದಿಗೆ ಆತ್ಮಹತ್ಯೆಗೆ (Suicide) ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯ (Belagavi) ಪೀರನವಾಡಿಯಲ್ಲಿ ನಡೆದಿದೆ. ಗಂಡನ ಮನೆಯವರು ಮಾಡಿದ್ದ ಸುಮಾರು 10 ಲಕ್ಷ ರೂ.ಗಳ ಸಾಲವನ್ನು ತೀರಿಸುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವುದೇ ಈ ದುರಂತಕ್ಕೆ ಕಾರಣವಾಗಿದೆ.
ಮೃತ ಯಾರು?
ಪ್ರೇಮಾ ನಾಗೇಶ ತಳವಾರ (28) ಹಾಗೂ ಅವರ 3 ವರ್ಷದ ಪುತ್ರ ಭುವನ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರು ಬೆಳಗಾವಿಯ ಪೀರನವಾಡಿ ಪಾಟೀಲ್ ಗಲ್ಲಿಯ ನಿವಾಸಿಗಳಾಗಿದ್ದರು. ಪ್ರೇಮಾ ಅವರು ಗೃಹಿಣಿಯಾಗಿದ್ದು, ತಮ್ಮ ಪತಿ ನಾಗೇಶ, ಅತ್ತೆ ಸುಶೀಲಾ ಮತ್ತು ಇತರೆ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರು.
ಕಿರುಕುಳಕ್ಕೆ ಬೇಸತ್ತು ತಾಯಿ-ಮಗ ಆತ್ಮಹತ್ಯೆ
ಗಂಡನ ಮನೆಯವರು ಮಾಡಿದ್ದ ಸುಮಾರು 10 ಲಕ್ಷ ರೂ. ಸೊಸೈಟಿ ಸಾಲವನ್ನು ತೀರಿಸುವಂತೆ ಪ್ರೇಮಾ ಅವರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಗಂಡ, ಅತ್ತೆ ಸೇರಿದಂತೆ ಕುಟುಂಬದ ಒಟ್ಟು 6 ಸದಸ್ಯರು ಪ್ರೇಮಾ ಅವರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳ ಮತ್ತು ಆರ್ಥಿಕ ಒತ್ತಡದಿಂದ ಮನನೊಂದ ಪ್ರೇಮಾ, ತಮ್ಮ ಮೂರು ವರ್ಷದ ಮಗನೊಂದಿಗೆ ಸೀರೆಯಿಂದ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಯಿ-ಮಗನ ಮೃತದೇಹ ಪತ್ತೆ
ಮಂಗಳವಾರ ಬೆಳಿಗ್ಗೆ ಪ್ರೇಮಾ ಮತ್ತು ಮಗ ಭುವನ್ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕುಟುಂಬಸ್ಥರು ಪತ್ತೆ ಮಾಡಿದ್ದಾರೆ. ತಕ್ಷಣ ಸ್ಥಳೀಯರು ಮಾಹಿತಿ ನೀಡಿದಾಗ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ರವಾನಿಸಿದ್ದಾರೆ.
ಕುಟುಂಬಸ್ಥರ ಆಕ್ರೋಶ ಹಾಗೂ ದೂರು
ಘಟನೆ ತಿಳಿಯುತ್ತಿದ್ದಂತೆ ಮೃತ ಪ್ರೇಮಾ ಅವರ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಮ್ಸ್ ಆಸ್ಪತ್ರೆಯ ಶವಗಾರದ ಮುಂದೆ ನೂರಾರು ಸಂಬಂಧಿಕರು ಜಮಾಯಿಸಿ, “ನಮ್ಮ ಮಗಳಿಗೆ ನ್ಯಾಯ ಕೊಡಿಸಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬಸ್ಥರ ದೂರಿನ ಮೇರೆಗೆ, ಪ್ರೇಮಾ ಅವರಿಗೆ ಕಿರುಕುಳ ನೀಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
6 ಜನರ ವಿರುದ್ಧ ಪ್ರಕರಣ
ಅತ್ತೆ ಸುಶೀಲಾ ತಳವಾರ, ಪತಿ ನಾಗೇಶ ತಳವಾರ, ಮೈದುನ ಪರಶುರಾಮ ತಳವಾರ, ನೆಗ್ಯಾನಿ (ನಾದಿನಿ) ಸಂಗೀತಾ ತಳವಾರ, ಮರೇವ್ವಾ ತಳವಾರ ಹಾಗೂ ಶಾರದಾ ಕಲಕಾಂವಕರ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಮಹಿಳಾ ಹಿಂಸೆ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
