ಬೆಳಗಾವಿಯಲ್ಲಿ ವಕೀಲೆಯ ಮನೆ ಮೇಲೆ ದುಷ್ಕರ್ಮಿಗಳಿಂದ ಮಧ್ಯರಾತ್ರಿ ಗುಂಡಿನ ದಾಳಿ

Untitled design 2026 04 26T171208.709

ಬೆಳಗಾವಿ, ಏಪ್ರಿಲ್ 26: ಕುಂದಾನಗರಿ ಎಂದೇ ಖ್ಯಾತವಾದ ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲ್ ಹಾಕುವಂತಹ ಘಟನೆಯೊಂದು ನಡೆದಿದೆ. ಬೆಳಗಾವಿಯ ಮಂಡೋಳಿ ರಸ್ತೆಯ ಪ್ರತಿಷ್ಠಿತ ವಕೀಲರ ಕುಟುಂಬದ ನಿವಾಸದ ಮೇಲೆ ದುಷ್ಕರ್ಮಿಗಳು ಮಧ್ಯರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಿವಾಸದಲ್ಲಿದ್ದ ವಕೀಲೆಯ ಪುತ್ರಿಯೊಬ್ಬಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಹೇಗೆ ನಡೆಯಿತು?
ಬೆಳಗಾವಿ ಮಂಡೋಳಿ ರಸ್ತೆಯಲ್ಲಿರುವ ಖ್ಯಾತ ವಕೀಲೆ ಪೂಜಾ ಕಾಕತಕರ್ ಅವರ ನಿವಾಸದ ಮೇಲೆ ಶನಿವಾರ ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯ ಸುಮಾರಿನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆಕೆಯ ಮನೆಯ ಮೊದಲ ಮಹಡಿಯ ಕಿಟಕಿಯನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ರಸ್ತೆಯಿಂದಲೇ ಫೈರಿಂಗ್ ಮಾಡಿದ್ದಾರೆ.

ಅದೃಷ್ಟ ಮತ್ತು ಪುತ್ರಿಯ ಆತಂಕಕಾರಿ ಕ್ಷಣ
ಆ ಸಮಯದಲ್ಲಿ ಮೊದಲ ಮಹಡಿಯ ಕೊಠಡಿಯಲ್ಲಿ ವಕೀಲೆ ಪೂಜಾ ಅವರ ಪುತ್ರಿ ಸಂಸ್ಕೃತಿ ಅವರು ತಮ್ಮ ಪರೀಕ್ಷೆಗಾಗಿ ಓದುತ್ತಿದ್ದರು. ದುಷ್ಕರ್ಮಿಗಳು ಗುಂಡು ಹಾರಿಸುತ್ತಿದ್ದಂತೆ, ಒಂದು ಗುಂಡು ಕಿಟಕಿಯ ಗಾಜಿಗೆ ಬಡಿದು ಚೂರುಚೂರಾಯಿತು.  ಆದರೆ, ಅದೃಷ್ಟವಶಾತ್ ಸಂಸ್ಕೃತಿ ಗುಂಡಿಗೆ ತಾಗದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬೆಚ್ಚಿಬಿದ್ದ ಸಂಸ್ಕೃತಿ ತಕ್ಷಣ ಕೆಳಗಿಳಿದು ತಮ್ಮ ಕುಟುಂಬದವರಿಗೆ ವಿಷಯ ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು
ಸುದ್ದಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸುಕೋ (SUCO) ತಂಡ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಸ್ಥಳವನ್ನು ತಪಾಸಣೆ ಮಾಡಿದರು. ಕಿಟಕಿಯ ಗಾಜಿನ ಮೇಲೆ ಗುಂಡಿನ ಗುರುತುಗಳನ್ನು ಗುರುತಿಸಿದರು. ಸ್ಥಳದಿಂದ ಗುಂಡಿನ ಅಂಶಗಳನ್ನು ಸಂಗ್ರಹಿಸಿ ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ.

ವಕೀಲೆ ಪೂಜಾ ಕಾಕತಕರ್ ಅವರು ಕಳೆದ 18 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿದ್ದು, ಅವರು ನಿರ್ವಹಿಸುತ್ತಿರುವ ಹಲವಾರು ಕೋರ್ಟ್ ಪ್ರಕರಣಗಳು ಇವರಿಗೆ ಶತ್ರುಗಳನ್ನು ಸೃಷ್ಟಿಸಿರುವ ಸಾಧ್ಯತೆಯಿದೆ. ಪೊಲೀಸರು ಈ ದಾಳಿಯ ಹಿಂದೆ ಯಾವುದೇ ಹಳೆಯ ದ್ವೇಷ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ.

Exit mobile version