ಬೆಳಗಾವಿ: ಮೈಸೂರಿನಲ್ಲಿ ಆಯೋಜಿಸಲಾಗಿರುವ ಬಹುನಿರೀಕ್ಷಿತ ‘ವಿಶ್ವ ರೈತ ಸಮಾವೇಶ’ಕ್ಕೆ ಹೊರಟಿದ್ದ ರೈತರ ವಾಹನವೊಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ವಾಹನ
ಸೋಮವಾರ ಮುಂಜಾನೆ ಬೈಲಹೊಂಗಲ ತಾಲೂಕಿನ ಗರಜೂರ ಗ್ರಾಮದ ರೈತರು ಮತ್ತು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಮೈಸೂರಿಗೆ ತೆರಳಲು ವಾಹನವೊಂದನ್ನು ಏರಿದ್ದರು. ಆದರೆ, ಜಾಲಿಕ್ಕೊಪ್ಪ ಗ್ರಾಮದ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯ ಬದಿಗೆ ಉರುಳಿ ಬಿದ್ದಿದೆ. ವಾಹನ ಪಲ್ಟಿಯಾಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
9 ಜನರಿಗೆ ಗಂಭೀರ ಗಾಯ
ಈ ಅಪಘಾತದಲ್ಲಿ ಒಟ್ಟು 30ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದು, ಅವರಲ್ಲಿ 9ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳ ಕೈ, ಕಾಲು ಮತ್ತು ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತ ನಡೆದ ಕೂಡಲೇ ಸ್ಥಳೀಯರು ಗಾಯಾಳುಗಳನ್ನು ವಾಹನದಿಂದ ಹೊರತೆಗೆಯಲು ಸಹಾಯ ಮಾಡಿದ್ದಾರೆ.
ಆಸ್ಪತ್ರೆಗೆ ದಾಖಲು ಮತ್ತು ತನಿಖೆ
ಗಾಯಾಳುಗಳನ್ನು ತಕ್ಷಣವೇ ಬೈಲಹೊಂಗಲ ಮತ್ತು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರೇಕ್ಷಣೀಯ ಸ್ಥಳದಲ್ಲಿ ಕೊಳಕ್ಕೆ ಬಿದ್ದು ತಾಯಿ-ಮಗಳು ಸಾ*ವು
ಕನಕಪುರ ತಾಲೂಕಿನ ಹೊಸದುರ್ಗ ಗ್ರಾಮದ ಸಮೀಪವಿರುವ ರಾಮದೇವರ ಬೆಟ್ಟದ ಕೊಳದಲ್ಲಿ ಬಿದ್ದು ತಾಯಿ ಮತ್ತು ಮಗಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ಭಾಗ್ಯಲಕ್ಷ್ಮಿ (35) ಮತ್ತು ಅವರ ಪುತ್ರಿ ಚಾರ್ವಿ (16) ಮೃತಪಟ್ಟ ದುರ್ದೈವಿಗಳು. ಭಾನುವಾರ ಕುಟುಂಬ ಸಮೇತ ರಾಮದೇವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬೆಟ್ಟದ ಮೇಲಿರುವ ಕೊಳದ ಬಳಿ ನಡೆದು ಹೋಗುವಾಗ ಪುತ್ರಿ ಚಾರ್ವಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ತಾಯಿ ಭಾಗ್ಯಲಕ್ಷ್ಮಿ, ಆಕೆಯನ್ನು ರಕ್ಷಿಸಲು ತಕ್ಷಣವೇ ಕೊಳಕ್ಕೆ ಜಿಗಿದಿದ್ದಾರೆ.ನೀರಿ ಆಳ ಹೆಚ್ಚಿದ್ದರಿಂದ ಇಬ್ಬರಿಗೂ ಈಜಿ ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಭಾಗ್ಯಲಕ್ಷ್ಮಿ ಅವರ ಪತಿ ಜೀವನ್ ಅವರು ಸ್ಥಳದಲ್ಲೇ ಇದ್ದರೂ, ನೀರಿನ ರಭಸಕ್ಕೆ ಇಬ್ಬರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪತಿ ಜೀವನ್ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
