ಅಮೆರಿಕದ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ರಾಜೀನಾಮೆ: ಇಸ್ರೇಲ್ ಯುದ್ದದ ಬಗ್ಗೆ ಸ್ಫೋಟಕ ಮಾಹಿತಿ

Untitled design 2026 03 17T213316.974

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಇರಾನ್ ಯುದ್ಧದ ಕುರಿತು ಅವರು ನೀಡಿರುವ ಹೇಳಿಕೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ಇರಾನ್‌ನಿಂದ ಯಾವುದೇ ಬೆದರಿಕೆ ಇರಲಿಲ್ಲ

ಜೋಸೆಫ್ ಕೆಂಟ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ದದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಇರಾನ್ ದೇಶವು ಅಮೆರಿಕಕ್ಕೆ ಯಾವುದೇ ರೀತಿಯ ಸನ್ನಿಹಿತ ಬೆದರಿಕೆ (Imminent Threat) ಒಡ್ಡಿರಲಿಲ್ಲ. ಆದರೂ ನಾವು ಯುದ್ಧ ಮಾಡುತ್ತಿರುವು ದುರದೃಷ್ಟಕರ ಎಂದು ಕೆಂಟ್ ತಮ್ಮ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಈ ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲದ ಕಾರಣ ತಾವು ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಅವರು ಘೋಷಿಸಿದ್ದಾರೆ.

ಈ ಲೇಖನದಲ್ಲಿ ಕೆಂಟ್ ಅವರು ಅತ್ಯಂತ ಸ್ಫೋಟಕ ಆರೋಪವೊಂದನ್ನು ಮಾಡಿದ್ದಾರೆ. ಅಮೆರಿಕವು ಇರಾನ್ ಮೇಲೆ ಯುದ್ಧ ಸಾರಲು ಇಸ್ರೇಲ್ ಸರ್ಕಾರದ ಒತ್ತಡ ಮತ್ತು ವಾಷಿಂಗ್ಟನ್‌ನಲ್ಲಿರುವ ಪ್ರಬಲ ಇಸ್ರೇಲಿ ಲಾಬಿಯೇ ಕಾರಣ ಎಂದು ಅವರು ನೇರವಾಗಿ ದೂರಿದ್ದಾರೆ. ಇಸ್ರೇಲ್ ಮತ್ತು ಅದರ ಪ್ರಭಾವಿ ಅಮೆರಿಕನ್ ಲಾಬಿಯ ನಿರಂತರ ಒತ್ತಡದಿಂದಾಗಿ ನಾವು ಈ ಅನಗತ್ಯ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಹಿರಿಯ ಇಸ್ರೇಲಿ ಅಧಿಕಾರಿಗಳು ಮತ್ತು ಅಮೆರಿಕದ ಕೆಲವು ಪ್ರಭಾವಿ ಮಾಧ್ಯಮಗಳು ಯೋಜಿತವಾಗಿ ತಪ್ಪು ಮಾಹಿತಿ ಅಭಿಯಾನವನ್ನು ನಡೆಸುತ್ತಿವೆ ಎಂದು ಕೆಂಟ್ ಆರೋಪಿಸಿದ್ದಾರೆ. ಅಮೆರಿಕದ ಜನಸಾಮಾನ್ಯರನ್ನು ದಾರಿತಪ್ಪಿಸಿ, ಇರಾನ್ ವಿರುದ್ಧ ಯುದ್ಧ ಮಾಡುವಂತೆ ಜನಮತ ರೂಪಿಸಲು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಅನ್ನು ಬಲವಂತವಾಗಿ ಸಂಘರ್ಷದತ್ತ ತಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಯುತ್ತಿದೆ ಎಂಬುದು ಕೆಂಟ್ ಅವರ ಗಂಭೀರ ವಾದವಾಗಿದೆ.

ಜಾಗತಿಕ ರಾಜಕೀಯದ ಮೇಲೆ ಪರಿಣಾಮ

ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥರ ಈ ನಡೆಯು ಟ್ರಂಪ್ ಆಡಳಿತಕ್ಕೆ ಮುಜುಗರ ತಂದಿದೆ. ಇರಾನ್ ಜೊತೆಗಿನ ಸಂಘರ್ಷವು ಕೇವಲ ರಕ್ಷಣಾತ್ಮಕ ಕ್ರಮವಲ್ಲ, ಬದಲಿಗೆ ರಾಜಕೀಯ ಪ್ರೇರಿತ ಎಂಬ ಸಂಶಯಕ್ಕೆ ಕೆಂಟ್ ಅವರ ರಾಜೀನಾಮೆ ಪುಷ್ಟಿ ನೀಡಿದೆ.

Exit mobile version