ಕರ್ನಲ್ ಸೋಫಿಯಾ ಖುರೇಶಿ ಕುಟುಂಬದ ಮೇಲೆ ದಾಳಿ ಎಂದು ಫೇಕ್ ನ್ಯೂಸ್ ಪೋಸ್ಟ್!

Untitled design 2025 05 14t100231.933

ಬೆಳಗಾವಿ: ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರ ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿಯು ಸಂಪೂರ್ಣ ಸುಳ್ಳು ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಈ ಫೇಕ್ ನ್ಯೂಸ್‌ನಿಂದ ಜನರಲ್ಲಿ ಗೊಂದಲ ಉಂಟಾಗಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಅನೀಸ್ ಉದ್ದೀನ್ ಎಂಬಾತನ ಎಕ್ಸ್ ಖಾತೆಯಿಂದ, “RSS ನೇತೃತ್ವದಲ್ಲಿ ಸೋಫಿಯಾ ಖುರೇಶಿ ಮತ್ತು ಅವರ ಪುತ್ರ ಸಮೀರ್ ಮೇಲೆ ಕ್ರೂರ ಹಲ್ಲೆ ನಡೆಸಿ, ಮನೆಗೆ ಬೆಂಕಿಯಿಟ್ಟು, ದ್ವೇಷಪೂರಿತ ಘೋಷಣೆಗಳನ್ನು ಕೂಗಲಾಗಿದೆ. ಭಾರತದಲ್ಲಿ ಮುಸ್ಲಿಮರಿಗೆ ಸ್ಥಳವಿಲ್ಲ, ಇದು ಹಿಂದುತ್ವದ ರಾಷ್ಟ್ರ ಎಂದು ಆರ್‌ಎಸ್‌ಎಸ್‌ನ ಹಿಟ್‌ಲಿಸ್ಟ್‌ನಲ್ಲಿ ಸೋಫಿಯಾ ಇದ್ದಾರೆ” ಎಂಬ ಕಾಲ್ಪನಿಕ ಮತ್ತು ದ್ವೇಷಪೂರಿತ ಪೋಸ್ಟ್ ಹರಡಿತ್ತು. ಈ ಪೋಸ್ಟ್‌ನಲ್ಲಿ ಕುಟುಂಬಸ್ಥರನ್ನು ಸ್ಥಳಾಂತರ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿಯೂ ಇತ್ತು.

ಈ ಫೇಕ್ ನ್ಯೂಸ್‌ನಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದರಿಂದ, ಬೆಳಗಾವಿ ಜಿಲ್ಲಾ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ. ಸೋಫಿಯಾ ಖುರೇಶಿ ಅವರ ಮಾವನ ಮನೆಗೆ ಭದ್ರತೆ ಒದಗಿಸಲಾಗಿದ್ದು, ಗೋಕಾಕ ಸಿಪಿಐ ಸುರೇಶ್ ಆರ್.ಬಿ. ಅವರು ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅನಗತ್ಯವಾಗಿ ಸಾರ್ವಜನಿಕರು ಕುಟುಂಬವನ್ನು ಭೇಟಿಯಾಗದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಡಾ. ಭೀಮಾಶಂಕರ ಗುಳೇದ ಅವರು, “ಈ ರೀತಿಯ ದ್ವೇಷಪೂರಿತ ಮತ್ತು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳಿಂದ ಜನರು ಗೊಂದಲಕ್ಕೊಳಗಾಗದಂತೆ ಮತ್ತು ಯಾವುದೇ ಮಾಹಿತಿಯನ್ನು ದೃಢೀಕರಿಸದೇ ಹಂಚಿಕೊಳ್ಳದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಲ್ ಸೋಫಿಯಾ ಖುರೇಶಿ ಭಾರತೀಯ ಸೇನೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬೆಳಗಾವಿಯ ಹೆಮ್ಮೆಯ ಸೊಸೆಯಾಗಿದ್ದಾರೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಇತ್ತೀಚೆಗೆ ಸುದ್ದಿಯಾಗಿದ್ದರು. ಈ ಫೇಕ್ ನ್ಯೂಸ್‌ನಿಂದ ಅವರ ಕುಟುಂಬದ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ.

ಈ ಫೇಕ್ ನ್ಯೂಸ್‌ನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಎಕ್ಸ್ ಖಾತೆಯ ಮೂಲಕವೂ ಸ್ಪಷ್ಟನೆ ನೀಡಿದ್ದು, ಜನರಿಗೆ ಆತಂಕಗೊಳಗಾಗದಂತೆ ಸೂಚನೆ ನೀಡಿದ್ದಾರೆ. ಕೊಣ್ಣೂರ ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸರು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದಾರೆ.

Exit mobile version