ಬೆಳಗಾವಿ: ವಿಮೆ ಹಣದ (Insurance Amount) ಆಸೆಗೆ ಬಿದ್ದು ಸ್ವಂತ ಪತಿಯನ್ನೇ (Husband) ಕೊಂದ (Crime) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ (Belagavi) ಯಮಕನಮರಡಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ಪ್ರಕರಣದ ಮುಖ್ಯ ಆರೋಪಿ ಸುಮಾ ಮಂಜರಗಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಂತೆ, ಅತ್ತ ಮಗಳ ಈ ದ್ರೋಹದ ಕೃತ್ಯದಿಂದ ಆಕೆಯ ಹೆತ್ತ ತಾಯಿ ನೇಣಿಗೆ ಶರಣಾಗಿದ್ದಾರೆ.
ತಾಯಿಯ ಆತ್ಮಹತ್ಯೆ: ಕುಟುಂಬದ ದುರಂತ
ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿ ತಾಯಿ ಮಹಾದೇವಿ ಬದಾಮಿ (57) ಅವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸ್ವಂತ ಮಗಳು ಮತ್ತು ಆಕೆಯ ಪ್ರಿಯಕರ ಸೇರಿ ಅಳಿಯನನ್ನು ಅತ್ಯಂತ ಕ್ರೂರವಾಗಿ ಕೊಂದ ವಿಷಯ ತಿಳಿಯುತ್ತಿದ್ದಂತೆ ತಾಯಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಜೂನ್ 14ರಂದು ಮಗಳನ್ನು ಯಮಕನಮರಡಿ ಪೊಲೀಸರು ಬಂಧಿಸುತ್ತಿದ್ದಂತೆ ತಾಯಿ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗಿದೆ.
ಮಗಳು ಮಾಡಿದ ಈ ಮಹಾಪಾಪದ ಕೃತ್ಯದಿಂದ ಇಡೀ ಊರಿನಲ್ಲಿ ತಲೆ ಎತ್ತಿ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಮಾಜದಲ್ಲಿ ತಮ್ಮ ಕುಟುಂಬದ ಮೇಲೆ ಬೀಳುವ ಅವಮಾನ ಮತ್ತು ತೀವ್ರ ದುಃಖವನ್ನು ಸಹಿಸಲಾರದೆ ಮಹಾದೇವಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಯಮಕನಮರಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಏನಿದು ಭೀಕರ ಕೊಲೆ ಪ್ರಕರಣ?
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಾಜಿ ಸೈನಿಕ ಸಂದೀಪ್ ಮಂಜರಗಿ ಎಂಬುವವರ ನಿಗೂಢ ಸಾವಾಗಿತ್ತು. ತನಿಖೆ ನಡೆಸಿದಾಗ ಸಂದೀಪ್ ಹೆಸರಲ್ಲಿದ್ದ ಬರೋಬ್ಬರಿ ಎರಡು ಕೋಟಿ ರೂಪಾಯಿ ಜೀವ ವಿಮೆ ಹಣವನ್ನು ಹೊಡೆಯಲು ಪತ್ನಿ ಸುಮಾ ಮಂಜರಗಿ ತನ್ನ ಪ್ರಿಯಕರ ಪುಂಡಲೀಕನ ಜೊತೆ ಸೇರಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಆಸ್ಪತ್ರೆಯಲ್ಲೇ ವಿಷ ಪ್ರಯೋಗ
ಮಾರ್ಚ್ 13ರಂದು ಸಂದೀಪ್ ಬೈಕ್‌ನಿಂದ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಗುಣಮುಖರಾಗಿ ಮನೆಗೆ ಮರಳುವ ಮುನ್ನವೇ, ಪತ್ನಿ ಸುಮಾ ಮತ್ತು ಆಕೆಯ ಪ್ರಿಯಕರ ಸೇರಿ ಆಸ್ಪತ್ರೆಯ ಸಲೈನ್ ಬಾಟಲಿಗೆ ವಿಷ ಬೆರಸಿ ಹಾಗೂ ಅತಿಯಾದ ನಿದ್ದೆ ಮಾತ್ರೆ ನೀಡಿ ಮಾರ್ಚ್ 15ರಂದು ಅವರನ್ನು ಕೊಲೆ ಮಾಡಿದ್ದರು. ಇದನ್ನು ಕೇವಲ ಅಪಘಾತದ ಸಾವು ಎಂದು ಬಿಂಬಿಸಲು ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಟಾ ಮಾಡಲು ವಿಧಿವಿಜ್ಞಾನ (FSL) ಪ್ರಯೋಗಾಲಯದ ಸಿಬ್ಬಂದಿಗೆ 3 ಲಕ್ಷಕ್ಕೂ ಅಧಿಕ ಲಂಚ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಾಟ್ಸಪ್ ಸ್ಟೇಟಸ್ನಿಂದ ಬಯಲಾಯ್ತು ರಹಸ್ಯ
ಯಾವುದೇ ಗಂಭೀರ ಗಾಯಗಳಿಲ್ಲದ ಸಂದೀಪ್ ಹಠಾತ್ತನೆ ಮೃತಪಟ್ಟಿದ್ದು ಪೊಲೀಸರಿಗೆ ಮೊದಲೇ ಅನುಮಾನ ಮೂಡಿತ್ತು. ಇದರ ನಡುವೆ, ಬರಲಿರುವ ವಿಮೆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ನಡುವೆ ಗಲಾಟೆ ನಡೆದಿತ್ತು. ಇದರಿಂದ ಕೋಪಗೊಂಡ ಪುಂಡಲೀಕ, “ಅಪಘಾತವಾದ ವ್ಯಕ್ತಿ ತಕ್ಷಣ ಸತ್ತಿದ್ದು ಹೇಗೆ?” ಎಂದು ವಾಟ್ಸಪ್ನಲ್ಲಿ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆಯ ಕರಾಳ ರಹಸ್ಯ ಹೊರಬಿದ್ದಿದೆ.
ಈ ಸಂಬಂಧ ಜೂನ್ 14 ರಂದು ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ ಸೇರಿದಂತೆ ಒಟ್ಟು ಒಂಬತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.