ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಅಂಗನವಾಡಿ ಶಿಕ್ಷಕಿ ಹತ್ಯೆ: ಆರೋಪಿ ಅಂದರ್‌

Untitled design (2)

ಬೆಳಗಾವಿ: ಕೊಟ್ಟ ಸಾಲವನ್ನು ವಾಪಸ್‌‌‌ ಕೇಳಿದ್ದಕ್ಕೆ ಶಿಕ್ಷಕಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ. ಅಂಗನವಾಡಿ ಶಿಕ್ಷಕಿಯಾದ ಅಶ್ವಿನಿ ಪಾಟೀಲ್ (50) ಮೃತ ದುರ್ದೈವಿ. ಆರೋಪಿ ಶಂಕರ್‌ ಪಾಟೀಲ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ

ಅಕ್ಟೋಬರ್ 2ರಂದು, ಅಶ್ವಿನಿ ಅವರು ಕಕ್ಕೇರಿ ಬಿಷ್ಟಾದೇವಿ ಜಾತ್ರೆಗೆಂದು ಶಂಕರ್ ಜೊತೆಗೆ ಹೊರಟಿದ್ದರು. ಆದರೆ, ಅವರು ಮನೆಗೆ ಮರಳಲಿಲ್ಲ. ಇದರಿಂದ ಕುಟುಂಬಸ್ಥರು ಆತಂಕಗೊಂಡು ನಂದಗಡ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದರು. ಕೇಸ್ ದಾಖಲಾದ ನಾಲ್ಕು ದಿನಗಳಲ್ಲಿ, ಕಾರವಾರ ಜಿಲ್ಲೆಯ ರಾಮನಗರದ ಅರಣ್ಯ ಪ್ರದೇಶದಲ್ಲಿ ಅಶ್ವಿನಿಯ ಶವ ಪತ್ತೆಯಾಯಿತು. ಶವ ಕಂಡುಬಂದ ಕೂಡಲೇ, ನಂದಗಡ ಪೊಲೀಸರು ರಾಮನಗರ ಪೊಲೀಸರೊಂದಿಗೆ ಸಂಪರ್ಕಿಸಿ ತನಿಖೆ ಆರಂಭಿಸಿದರು.

ತನಿಖೆಯ ವೇಳೆ, ಶಂಕರ್ ಪಾಟೀಲ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಆರಂಭದಲ್ಲಿ ಕೊಲೆಯನ್ನು ನಿರಾಕರಿಸಿದ ಶಂಕರ್, ಪೊಲೀಸರ ವಿಚಾರಣೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಶ್ವಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶಂಕರ್, ಆಕೆಯಿಂದ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ, ಆಕೆಯು ಹಣವನ್ನು ವಾಪಸ್ ಕೇಳಿದಾಗ, ಶಂಕರ್ ಕೋಪಗೊಂಡು ಜಾತ್ರೆಯ ನೆಪದಲ್ಲಿ ಆಕೆಯನ್ನು ಕರೆದೊಯ್ದು, ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ, ಶವವನ್ನು ರಾಮನಗರದ ಅರಣ್ಯದಲ್ಲಿ ಬಿಟ್ಟು ಬಂದಿದ್ದಾನೆ.

ಅಶ್ವಿನಿಯ ಗಂಡ 30 ವರ್ಷಗಳಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತು ಅವರ ಮಗ ಬೇರೊಂದು ಊರಿನಲ್ಲಿ ಉದ್ಯೋಗದಲ್ಲಿದ್ದಾನೆ. ಶಂಕರ್, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದವನು, ಅಶ್ವಿನಿಯ ಮನೆ ಕಟ್ಟುವ ವೇಳೆ ಆಕೆಗೆ ಪರಿಚಯವಾಗಿದ್ದ. ಕ್ರಮೇಣ, ಆಕೆಗೆ ಸಹಾಯ ಮಾಡುವ ನೆಪದಲ್ಲಿ ಸ್ನೇಹ ಬೆಳೆಸಿ, ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದ. ಈ ಸಂಬಂಧದ ಲಾಭವನ್ನು ಪಡೆದುಕೊಂಡು, ಶಂಕರ್ ಆಕೆಯಿಂದ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಂಡಿದ್ದ. ಆದರೆ, ಹಣವನ್ನು ವಾಪಸ್ ಕೇಳಿದಾಗ, ಆತ ಈ ಕೃತ್ಯಕ್ಕೆ ಮುಂದಾಗಿದ್ದಾನೆ.

ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಶೀಘ್ರವೇ ನಂದಗಡ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಬೆಳಗಾವಿ ಎಸ್‌ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. “ಮತ್ತಷ್ಟು ತನಿಖೆ ನಡೆಸಿ, ಕೊಲೆಯ ನಿಖರ ಕಾರಣವನ್ನು ಪತ್ತೆಹಚ್ಚುತ್ತೇವೆ,” ಎಂದು ಅವರು ಹೇಳಿದ್ದಾರೆ.

Exit mobile version