ಡಿ.ಕೆ.ಶಿವಕುಮಾರ್ ಭೇಟಿ ನೀಡಬೇಕಿದ್ದ ದೇವಾಲಯದಲ್ಲಿ ಹೆಜ್ಜೇನು ದಾಳಿ: ಇದು ಶುಭವೋ..! ಅಶುಭವೋ..!

Untitled design 2025 11 29T172537.916

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿಯ ಐತಿಹಾಸಿಕ ಶ್ರೀ ಭೂವರಾಹನಾಥ ಸ್ವಾಮಿ ದೇವಾಲಯಕ್ಕೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಲು ತೆರಳುತ್ತಿದ್ದಂತೆಯೇ ದೇಗುಲದಲ್ಲಿ ಅಪಶಕುನದ ಘಟನೆ ನಡೆದಿದೆ. ಡಿಕೆಶಿ ಆಗಮನಕ್ಕೂ ಮುನ್ನವೇ ದೇವಾಲಯದ ಆವರಣದಲ್ಲಿ ದೊಡ್ಡ ಪ್ರಮಾಣದ ಹೆಜ್ಜೇನುಗಳ ಗುಂಪು ದಾಳಿ ಮಾಡಿದ್ದು, ಭಕ್ತರು ಮತ್ತು ಸ್ಥಳೀಯರು ಆತಂಕಕ್ಕೆ ಒಳಗಾದರು.

ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ವಿದ್ಯಾಗಿರಿಯಲ್ಲಿ ಉಪಾಹಾರ ಭೇಟಿ ನಡೆಸಿದ ಬಳಿಕ ಡಿ.ಕೆ.ಶಿವಕುಮಾರ್ ನೇರವಾಗಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು. ಇದೇ ವೇಳೆ ತಾನು ಆರಾಧ್ಯ ದೈವವೆಂದು ಭಾವಿಸುವ ಭೂವರಾಹನಾಥ ಸ್ವಾಮಿಯ ದರ್ಶನ ಪಡೆಯಲು ಕಲ್ಲಹಳ್ಳಿ ದೇವಾಲಯಕ್ಕೆ ತೆರಳುತ್ತಿದ್ದಂತೆ ಈ ಘಟನೆ ನಡೆದಿದೆ.

ದೇವಾಲಯದಲ್ಲಿ ಡಿಕೆಶಿ ಆಗಮನಕ್ಕೆ ವಿಶೇಷ ಸಿದ್ಧತೆಗಳು ನಡೆದಿದ್ದವು. ಉಪಮುಖ್ಯಮಂತ್ರಿಗಳ ಆರೋಗ್ಯ, ದೀರ್ಘಾಯುಷ್ಯ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಮಹಾ ಮೃತ್ಯುಂಜಯ ಹೋಮವನ್ನು ಆಯೋಜಿಸಲಾಗಿತ್ತು. ಈ ಹೋಮದಲ್ಲಿ ಡಿಕೆಶಿ ಸ್ವತಃ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಬೇಕಿತ್ತು. ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಊರ ಗಣ್ಯರು ದೊಡ್ಡ ಸಂಖ್ಯೆಯಲ್ಲಿ ದೇಗುಲದಲ್ಲಿ ನೆರೆದಿದ್ದರು. ಡಿಕೆಶಿ ಸ್ವಾಗತಕ್ಕಾಗಿ ಬ್ಯಾನರ್‌ಗಳು, ತೋರಣಗಳು, ಢಂಕಾ-ಢಮಕಾ ಸಹಿತ ಭಾರೀ ಪ್ರಮಾಣದಲ್ಲಿ ದೇಗುಲವನ್ನ ಸಿದ್ದಗೊಳಿಸಲಾಗಿತ್ತು.

ಆದರೆ ಎಲ್ಲ ಸಿದ್ಧತೆಗಳ ನಡುವೆಯೇ ದೇವಾಲಯದ ಮುಂಭಾಗದ ಮರಗಳಿಂದ ಹಠಾತ್ತನೆ ದೊಡ್ಡ ಹೆಜ್ಜೇನು ಗುಂಪೊಂದು ಹಾರಿ ಬಂದು ಭಕ್ತರ ಮೇಲೆ ದಾಳಿ ಮಾಡಿತು. ಕ್ಷಣಾರ್ಧದಲ್ಲಿ ದೇಗುಲದ ಆವರಣದಲ್ಲಿ ಆತಂಕ ಉಂಟಾಯಿತು. “ಹೆಜ್ಜೇನು! ಹೆಜ್ಜೇನು!” ಎಂದು ಕೂಗಾಡಿಕೊಂಡು ಭಕ್ತರು ದಿಕ್ಕಾಪಾಲಾಗಿ ಓಡಾಡಿದರು. ಮಕ್ಕಳು, ವೃದ್ಧರು, ಮಹಿಳೆಯರು ಎಲ್ಲರೂ ಆತಂಕದಿಂದ ದೇಗುಲದಿಂದ ಓಡಿ ತಪ್ಪಿಸಿಕೊಂಡರು.

ಕೆಲವರಿಗೆ ಹೆಜ್ಜೇನು ಕಡಿದಿದ್ದು, ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಸ್ಥಳೀಯರು ಮತ್ತು ದೇವಾಲಯ ಸಿಬ್ಬಂದಿ ತಕ್ಷಣ ಗಿಡಮೂಲಿಕೆಗಳು, ಸುಣ್ಣ, ಧೂಪ ಹಚ್ಚಿ ಹೆಜ್ಜೇನುಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಸುಮಾರು ಅರ್ಧ ಗಂಟೆಯ ಕಾರ್ಯಾಚರಣೆ ಬಳಿಕ ಹೆಜ್ಜೇನು ಚದುರಿದೆ.

ಡಿಸಿಎಂ ಆಗಮನಕ್ಕೂ ಮುನ್ನ ಮೃತ್ಯುಂಜಯ ಹೋಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷ ಪೂಜೆ ಸಲ್ಲಿಸಿ ಬಳಿಕ ಹೋಮದಲ್ಲಿ ಡಿಕೆಶಿ ಭಾಗಿಯಾಗಲಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಮೃತ್ಯುಂಜಯ ಹೋಮ ನಡೆಸಲಾಗುತ್ತಿದೆ. ಡಿಕೆಶಿ ಸ್ವಾಗತಕ್ಕಾಗಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ದೇವಸ್ಥಾನದಲ್ಲಿ ನೆರೆದಿದ್ದಾರೆ.

Exit mobile version