ಗಣೇಶ್ ಹಬ್ಬಕ್ಕೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ: ಏನೇನು ರೂಲ್ಸ್

Untitled design (60)

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಗೌರಿ-ಗಣೇಶ ಹಬ್ಬ ಬರಲಿದೆ. ಬೀದಿ ಬೀದಿಗಳಲ್ಲಿ ಗಣಪತಿಯನ್ನು ಕೂರಿಸಿ, ಸಂಭ್ರಮದಿಂದ ಆಚರಿಸುವ ಈ ಉತ್ಸವಕ್ಕೆ ತಯಾರಿ ಭರದಿಂದ ಸಾಗಿದೆ. ಆದರೆ, ಪರಿಸರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಹಬ್ಬದ ಆಚರಣೆಯನ್ನು ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿ ಮಾಡುವ ಉದ್ದೇಶ ಹೊಂದಿವೆ. ಗಣೇಶ ಮೂರ್ತಿ ತಯಾರಿಕೆಯಿಂದ ಹಿಡಿದು ವಿಸರ್ಜನೆಯವರೆಗೆ ಎಲ್ಲಾ ಹಂತಗಳಲ್ಲಿ ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಬಿಬಿಎಂಪಿ ಪ್ರಕಾರ, ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ), ರಾಸಾಯನಿಕ ಬಣ್ಣಗಳು ಮತ್ತು ಥರ್ಮಕೋಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ವಸ್ತುಗಳು ನೀರಿನಲ್ಲಿ ಕರಗದೆ ಮಾಲಿನ್ಯವನ್ನು ಉಂಟುಮಾಡುತ್ತವೆ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ. ಹಲವು ವರ್ಷಗಳಿಂದಲೂ ಈ ನಿಯಮ ಇದ್ದರೂ, ಈಗ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

ನೋಡಲ್ ಅಧಿಕಾರಿಗಳು, ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ಬೆಸ್ಕಾಂ ಅಧಿಕಾರಿಗಳು ಖುದ್ದು ತಯಾರಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಲ್ಲದೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅಲ್ಲದೆ, ನಿಷೇಧಿತ ಮೂರ್ತಿಗಳನ್ನು ವಶಪಡಿಸಿಕೊಂಡು ನಿಯಮಾನುಸಾರ ವಿಲೇವಾರಿ ಮಾಡಲಾಗುವುದು.

ಪರಿಸರ ಸ್ನೇಹಿ ಮೂರ್ತಿಗಳ ಪ್ರೋತ್ಸಾಹ: ಬಿಬಿಎಂಪಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಬಳಸುವಂತೆ ಸಾರ್ವಜನಿಕರಿಗೆ ಕರೆ ನೀಡಿದೆ. ತಯಾರಕರಿಗೆ ಇದಕ್ಕೆ ಬೆಂಬಲ ನೀಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಅಭಿಯಾನಗಳನ್ನು ನಡೆಸಲು ಯೋಜಿಸಲಾಗಿದೆ. ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸುವವರು ಬಕೆಟ್‌ಗಳಲ್ಲಿ ವಿಸರ್ಜನೆ ಮಾಡಿ, ಬಂದ ಮಣ್ಣನ್ನು ಹೂವಿನ ಕುಂಡಗಳು ಅಥವಾ ಗಿಡಗಳಿಗೆ ಬಳಸುವಂತೆ ಸಲಹೆ ನೀಡಲಾಗಿದೆ. ಇದರಿಂದ ಮಣ್ಣು ವ್ಯರ್ಥವಾಗದೆ ಪರಿಸರಕ್ಕೆ ಉಪಯೋಗವಾಗುತ್ತದೆ.

ಅನುಮತಿ ಪ್ರಕ್ರಿಯೆ: ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ಕಡ್ಡಾಯವಾಗಿದೆ. ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆಯ ಮೂಲಕ ಅರ್ಜಿ ಸಲ್ಲಿಸಬೇಕು. ಉಪ ವಿಭಾಗ ಮಟ್ಟದಲ್ಲಿ ನೇಮಕಗೊಂಡ ನೋಡಲ್ ಅಧಿಕಾರಿಗಳು (ಸಹಾಯಕ ಕಾರ್ಯಪಾಲಕ ಅಭಿಯಂತರರು) ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಲಿದ್ದಾರೆ. ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಮತ್ತು ಇತರ ಇಲಾಖೆಗಳ ಸಲಹೆ ಪಡೆದು ಶೀಘ್ರವಾಗಿ ಅನುಮತಿ ಕೊಡುವಂತೆ ಸೂಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 75 ಕೇಂದ್ರಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾರ್ಡ್‌ಗೆ ಒಬ್ಬ ನೋಡಲ್ ಅಧಿಕಾರಿ ನೇಮಕಗೊಳ್ಳಲಿದ್ದಾರೆ.

ವಿಸರ್ಜನೆ ವ್ಯವಸ್ಥೆ: ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯ ತಡೆಯಲು ಬಿಬಿಎಂಪಿ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ದೊಡ್ಡ ಗಾತ್ರದ ಮೂರ್ತಿಗಳನ್ನು ಮಾತ್ರ ಕಲ್ಯಾಣಿ ಅಥವಾ ನಿಗದಿತ ವಿಸರ್ಜನಾ ಸ್ಥಳಗಳಲ್ಲಿ ವಿಸರ್ಜಿಸುವಂತೆ ಸೂಚಿಸಲಾಗಿದೆ. ತಾತ್ಕಾಲಿಕ ವಿಸರ್ಜನಾ ಸ್ಥಳಗಳನ್ನು ನಿರ್ಮಿಸಿ, ಅಲ್ಲಿ ಮಣ್ಣು, ಹೂಗಳು, ಪ್ಲಾಸ್ಟಿಕ್ ಮುಂತಾದವುಗಳನ್ನು ವಿಂಗಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗುವುದು.

ಪ್ರತಿ ಸ್ಥಳದಲ್ಲಿ ಪ್ರತ್ಯೇಕ ತಂಡ ರಚಿಸಿ, ಸಾರ್ವಜನಿಕರ ಸುರಕ್ಷತೆಗಾಗಿ ಆಂಬ್ಯುಲೆನ್ಸ್, ವೈದ್ಯರ ತಂಡ, ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್, ಧ್ವನಿವರ್ಧಕ ಮತ್ತು ನುರಿತ ಈಜುಗಾರರ ಸೇರಿದಂತೆ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗುವುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಹೆಚ್‌ಸಿ) ವೈದ್ಯರು ಸಿದ್ಧರಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತಪ್ಪಿಸುವಂತೆ ಎಚ್ಚರಿಕೆ ನೀಡಲಾಗಿದೆ.

Exit mobile version