ಕರ್ನಾಟಕಕ್ಕೆ ಭೇಟಿ ನೀಡಿದ ಜರ್ಮನಿಯ ಬವೇರಿಯಾ ಸಂಸತ್ತಿನ ಅಧ್ಯಕ್ಷರ ನೇತೃತ್ವದ ತಂಡ

Untitled design (78)

ಬೆಂಗಳೂರು, ನವೆಂಬರ್ 17: ಜರ್ಮನಿಯ ಬವೇರಿಯಾ ರಾಜ್ಯ ಸಂಸತ್ತಿನ ಅಧ್ಯಕ್ಷೆ ಇಲ್ಸೆ ಐಗ್ನರ್ ಅವರ ನೇತೃತ್ವದ 14 ಸದಸ್ಯ ತಂಡವು ಸೋಮವಾರ ವಿಧಾನಸೌಧದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ, ರಾಜ್ಯದ ಗ್ಯಾರಂಟಿ ಯೋಜನೆಗಳು, ಮಹಿಳಾ ಸಬಲೀಕರಣ, ಸುಸ್ಥಿರ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಾಲಿನಿ ರಜನೀಶ್ , ಕರ್ನಾಟಕವು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಆಗಿರುವ ಬದಲಾವಣೆ, ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿದ್ದಾರೆ. ಇದರ ಜೊತೆಗೆ ಯಾವುದೇ ತಾರತಮ್ಯವಿಲ್ಲದೇ, ವಿಶೇಷವಾಗಿ ಮಹಿಳೆಯರ ಸ್ವಾವಲಂಬನೆಗೆ ಒತ್ತು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗಳನ್ನು ಜಾರಿಗೊಲಿಸಿರುವ ಸಮಾನತೆ, ಪ್ರಜಾಪ್ರಭುತ್ವದ ಜೀವಾಳ. ಬಡವರಿಗೆ ಘನತೆಯ ಬದುಕು ಕೊಡುವುದು ಈ ಯೋಜನೆಗಳ ಮೂಲ ಉದ್ದೇಶ ಎಂದು ಅವರು ಒತ್ತಿ ಹೇಳಿದರು.

 ಗ್ಯಾರಂಟಿ ಯೋಜನೆಗಳ ಪ್ರಮುಖ ಸಾಧನೆಗಳು:

ಈ ಯೋಜನೆಗಳಿಂದ ಎರಡೇ ವರ್ಷಗಳಲ್ಲಿ ರಾಜ್ಯದ ತಲಾ ಆದಾಯ ದೇಶದಲ್ಲಿ ಅತಿ ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು. ಐದು ಪ್ರಮುಖ ಸಂಶೋಧನಾ ಸಂಸ್ಥೆಗಳು ನಡೆಸಿದ ಅಧ್ಯಯನಗಳು ಈ ಯೋಜನೆಗಳ ಸಕಾರಾತ್ಮಕ ಪ್ರಭಾವವನ್ನು ದೃಢಪಡಿಸಿವೆ.

ಜರ್ಮನ್ ನಿಯೋಗವು ಮಹಿಳಾ ಸಬಲೀಕರಣ, ಸಾಮಾಜಿಕ ಭದ್ರತೆ, ಸ್ಥಳೀಯ ಆಡಳಿತ ಮತ್ತು ಸಂಸದೀಯ ವ್ಯವಸ್ಥೆ ಕುರಿತು ಆಸಕ್ತಿ ತೋರಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಮಳೆನೀರಿನ ಚರಂಡಿಗಳನ್ನು ಹಸಿರು-ಶುದ್ಧ ಸ್ಥಳಗಳನ್ನಾಗಿ ಮಾರ್ಪಡಿಸುತ್ತಿರುವ “K-100” ಯೋಜನೆಯ ಕಿರುಪುಸ್ತಕವನ್ನು ಮುಖ್ಯ ಕಾರ್ಯದರ್ಶಿಗಳು ನಿಯೋಗಕ್ಕೆ ಹಂಚಿದರು.

ಪರಿಸರ ಸಂರಕ್ಷಣೆ, ಡೀಪ್‌ಟೆಕ್, ಉತ್ಪಾದನೆ, ಸಂಶೋಧನೆ-ಅಭಿವೃದ್ಧಿ ಕ್ಷೇತ್ರಗಳಲ್ಲಿ ಬವೇರಿಯಾ-ಕರ್ನಾಟಕ ನಡುವೆ ಸಹಕಾರ ಹೆಚ್ಚಿಸಿಕೊಳ್ಳಬೇಕೆಂದು ಎರಡೂ ಕಡೆ ಒಪ್ಪಿಗೆ ಆಯಿತು. ಬೆಂಗಳೂರು ಟೆಕ್ ಸಮ್ಮಿಟ್-2025ರಲ್ಲಿ ಭಾಗವಹಿಸುತ್ತಿರುವ ನಿಯೋಗಕ್ಕೆ ಡಾ. ಶಾಲಿನಿ ರಜನೀಶ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಸಾಂಪ್ರದಾಯಿಕ ಬೆಳ್ಳಿ ಕರಕುಶಲ, ಬಿದರಿ ಕಲೆ ಮತ್ತು ಕಸೂತಿ ಕಲೆಯ ಸ್ಮರಣಿಕೆಗಳನ್ನು ಇಲ್ಸೆ ಐಗ್ನರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಒಂದು ರಾಜ್ಯ-ಹಲವು ಜಗತ್ತು ಎಂಬ ಹೆಗ್ಗಳಿಕೆಯ ಕರ್ನಾಟಕದ ಪ್ರವಾಸಿ ಸಂಪತ್ತನ್ನು ಸಂಪೂರ್ಣ ಅನುಭವಿಸಲು ಮುಂದಿನ ಬಾರಿ ಇಡೀ ರಾಜ್ಯ ಸುತ್ತಿ ಬರುವಂತೆ ಆಹ್ವಾನಿಸಲಾಯಿತು.

Exit mobile version