ಕಾರವಾರ (ಯಲ್ಲಾಪುರ): ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆಯನ್ನು ನಡು ರಸ್ತೆಯಲ್ಲೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯು ಬಳಿಕ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
ಯಲ್ಲಾಪುರ ನಿವಾಸಿ ರಂಜಿತಾ (30) ಎಂಬ ಮಹಿಳೆಯೇ ಈ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ. ಆರೋಪಿ ರಫೀಕ್ ಎಂಬ ಯುವಕ, ರಂಜಿತಾಳನ್ನು ಮದುವೆಯಾಗುವಂತೆ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದನೆಂದು ತಿಳಿದುಬಂದಿದೆ. ರಂಜಿತಾ ಈ ಮದುವೆಗೆ ನಿರಾಕರಿಸಿದ್ದರೂ, ಆರೋಪಿ ಪದೇಪದೇ ಸತಾಯಿಸುತ್ತಿದ್ದ ಎನ್ನಲಾಗಿದೆ.
ರಂಜಿತಾ ಹತ್ತು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದು, ಒಂದು ಮಗುವಿನ ತಾಯಿ. ಯಲ್ಲಾಪುರದಲ್ಲಿ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ವಾಸವಿದ್ದ ಅವರು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಹಿಂದಿನ ವಿವಾಹ ಜೀವನದಲ್ಲಿ ಅನುಭವಿಸಿದ ನೋವು ಮತ್ತು ಸಂಕಷ್ಟಗಳ ಕಾರಣದಿಂದ ಮತ್ತೆ ಮದುವೆಯಾಗುವುದಿಲ್ಲ ಎಂದು ಅವರು ಹೇಳಿದ್ದರು.
ರಂಜಿತಾ ಕುಟುಂಬ ಮತ್ತು ಆರೋಪಿ ರಫೀಕ್ ಕುಟುಂಬದ ನಡುವೆ ಪರಿಚಯವಿದ್ದು, ಈ ಕಾರಣದಿಂದ ರಫೀಕ್ ಆಗಾಗ ರಂಜಿತಾಳ ಮನೆಗೆ ಬರುತ್ತಿದ್ದನೆಂದು ಹೇಳಲಾಗಿದೆ.
ಘಟನೆ ನಡೆದ ದಿನ, ಎಂದಿನಂತೆ ಶಾಲೆಯಿಂದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ರಂಜಿತಾಳನ್ನು ನಡು ರಸ್ತೆಯಲ್ಲೇ ರಫೀಕ್ ಅಡ್ಡಗಟ್ಟಿದ್ದಾನೆ. “ನನ್ನನ್ನು ಮದುವೆಯಾಗುತ್ತೀಯೋ ಇಲ್ಲವೋ?” ಎಂದು ಮತ್ತೆ ಪ್ರಶ್ನಿಸಿದ್ದಾನೆ. ಇದಕ್ಕೆ ರಂಜಿತಾ ಖಡಕ್ ಆಗಿ “ನಾನು ಮದುವೆಯಾಗಲ್ಲ” ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ, ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಂಜಿತಾಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ಯಲ್ಲಾಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಯಲ್ಲಾಪುರ ಬಂದ್‌ಗೆ ಕರೆ ನೀಡಿದ್ದವು.
ಇದೇ ವೇಳೆ, ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ರಫೀಕ್‌ನ ಪತ್ತೆಗಾಗಿ ಪೊಲೀಸರು ಶ್ವಾನದಳದ ಸಹಾಯದಿಂದ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಶೋಧದ ವೇಳೆ, ಯಲ್ಲಾಪುರದ ಕಾಳಮ್ಮನಗರದ ನಿವಾಸದಲ್ಲಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಆರೋಪಿ ಮೃತಪಟ್ಟಿರುವುದು ದೃಢಪಟ್ಟಿದೆ.
