ಬೆಂಗಳೂರು: ಬೆಂಗಳೂರಿನ ಮಹಿಳೆಯೊಬ್ಬರಿಗೆ ಅನಾಮಧೇಯ ವ್ಯಕ್ತಿಗಳಿಂದ ಜೀವ ಬೆದರಿಕೆ, ಮಕ್ಕಳ ಅಪಹರಣ ಮತ್ತು ಲೈಂಗಿಕ ಶೋಷಣೆಯ ಬೆದರಿಕೆ ಹಾಕಿರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.
ಪ್ರಿಯಾಂಕ ರಾಯ್ ಎಂಬ ಮಹಿಳೆಯ ಪತಿ ಮೋಹಿನ್ ರಾಯ್, ಶೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿದ ಆರ್ಥಿಕ ವ್ಯವಹಾರದಲ್ಲಿ ವಿವಾದ ಉಂಟಾದ ಹಿನ್ನೆಲೆ ಮಧ್ಯಪ್ರದೇಶದ ಇಂದೋರ್ ಪೊಲೀಸರ ಬಂಧನದಲ್ಲಿದ್ದಾರೆ. ಈ ಬಂಧನದ ಬಳಿಕವೂ, ಇಂದೋರ್ ಮೂಲದ ಕೆಲವು ವ್ಯಕ್ತಿಗಳು ತಮ್ಮ ಹಣವನ್ನು ಕೂಡಲೇ ಮರಳಿಸದಿದ್ದರೆ ಕುಟುಂಬದ ಮೇಲೆ ಭೀಕರ ದಾಳಿಯನ್ನು ನಡೆಸುವುದಾಗಿ, ಮಕ್ಕಳನ್ನು ಅಪಹರಿಸುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯಾಂಕ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಪ್ರಕಾರ, ಶಿರಾಜ್ ಖಾನ್, ರೇಖಾ ಸೊಲಂಕಿ, ರಾಜೇಶ್ ಸೊಲಂಕಿ, ಜಿತೇಂದ್ರ ಪಾಟಿದಾರ್ ಮತ್ತು ರಜನೀಶ್ ಪನ್ನಾಲಾಲ್ ಪಾಂಡೆ ಎಂಬುವವರು ವಾಟ್ಸಾಪ್, ಫೋನ್ ಕರೆಗಳ ಮೂಲಕ ಅನೇಕ ಬಾರಿ ಸಂಪರ್ಕಿಸಿದ್ದು, ತಮ್ಮ ಹಣವನ್ನು ಮರಳಿಸದಿದ್ದರೆ ಮೂರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಅಪಹರಿಸಿ, ವೇಶ್ಯಾವಾಟಿಕೆ ಕೇಂದ್ರಗಳಿಗೆ ಮಾರಾಟ ಮಾಡುವುದಾಗಿ ಹಾಗೂ ನಗ್ನ ವೀಡಿಯೊ ಮಾಡಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪ್ರಿಯಾಂಕ ಆರೋಪಿಸಿದ್ದಾರೆ.
ಇದಲ್ಲದೆ, ತಮ್ಮನ್ನು ಶಾರ್ಪ್‌ಶೂಟರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಫೋಟೋವನ್ನೂ ಕಳುಹಿಸಿದ್ದಾರೆ ಆಗಾಗಿ ಕುಟುಂಬದ ಜೀವಕ್ಕೆ ಅಪಾಯವಿದೆ ಎಂದು ಪ್ರಿಯಾಂಕ ರಾಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನಮ್ಮ ಜೀವಕ್ಕೆ ಅಪಾಯವಾಗಿದೆ. ಪೊಲೀಸರು ರಕ್ಷಣೆಯನ್ನು ಒದಗಿಸಬೇಕು” ಎಂದು ಪ್ರಿಯಾಂಕ ರಾಯ್ ಮನವಿ ಮಾಡಿದ್ದು,
ಈ ಕುರಿತು ಅವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ