ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ತನ್ನ ಸಂಚಾರ ದಟ್ಟಣೆಗೆ ಈಗಾಗಲೇ ಹೆಸರಾಗಿದೆ. ಆದರೆ, ಅಕ್ಟೋಬರ್ 1, 2025 ರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾರಣ, ಬಹುತೇಕ ಖಾಸಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ (WFH) ಸೌಲಭ್ಯವನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿವೆ. ಈ ತೀರ್ಮಾನದಿಂದಾಗಿ, ರಾಜಧಾನಿಯ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದ್ದು, ಟ್ರಾಫಿಕ್ ದಟ್ಟಣೆಯ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ.
ಬೆಂಗಳೂರಿನ ಔಟರ್ ರಿಂಗ್ ರೋಡ್ ನಲ್ಲಿ, ಐಟಿ ಕಂಪನಿಗಳ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ. ಸುಮಾರು 500 ಪ್ರತಿಷ್ಠಿತ ಕಂಪನಿಗಳು ಮತ್ತು 2,000 ಕಚೇರಿಗಳನ್ನು ಹೊಂದಿದೆ. ಈ ಕಂಪನಿಗಳಲ್ಲಿ ಶೇಕಡಾ 80ರಷ್ಟು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕಚೇರಿಯಿಂದ ಕೆಲಸ ಮಾಡುವಂತೆ ಸೂಚಿಸಿವೆ. ಇದರಿಂದಾಗಿ, ಔಟರ್ ರಿಂಗ್ ರೋಡ್‌ನಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆಯಿದೆ. ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ, ಈ ರಸ್ತೆಯಲ್ಲಿ ದಿನಕ್ಕೆ 82,000 ವಾಹನಗಳು ಸಂಚರಿಸುತ್ತಿದ್ದವು. ಈ ವರ್ಷ ಈಗಾಗಲೇ 1.2 ಲಕ್ಷಕ್ಕೆ ಏರಿಕೆಯಾಗಿದೆ. ವರ್ಕ್ ಫ್ರಮ್ ಹೋಮ್ ರದ್ದತಿಯಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ವರ್ಕ್ ಫ್ರಮ್ ಹೋಮ್ ಸೌಲಭ್ಯವು ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನಪ್ರಿಯವಾಗಿತ್ತು. ಇದು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಸೌಕರ್ಯವನ್ನು ಒದಗಿಸಿದ್ದಲ್ಲದೆ, ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿತ್ತು. ಆದರೆ, ಈಗ ಕಂಪನಿಗಳು ಉತ್ಪಾದಕತೆ ಮತ್ತು ತಂಡದ ಸಹಯೋಗವನ್ನು ಹೆಚ್ಚಿಸಲು ಕಚೇರಿಯಿಂದ ಕೆಲಸ ಮಾಡುವ ನೀತಿಯನ್ನು ಮರಳಿ ಜಾರಿಗೆ ತರುತ್ತಿವೆ. ಇದರಿಂದಾಗಿ, ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ತೀವ್ರವಾಗಿ ಹೆಚ್ಚಾಗುವ ಆತಂಕವಿದೆ.
ಈ ನಿರ್ಧಾರಕ್ಕೆ ಗ್ರೇಟರ್ ಬೆಂಗಳೂರು ಐಟಿ ಕಂಪನೀಸ್ ಆಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಕಾಯಂಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಸೌಲಭ್ಯವು ಉದ್ಯೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ, ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು ಎಂದು ಅವರು ವಾದಿಸಿದ್ದಾರೆ.