Reels ಹುಚ್ಚಿಗೆ ರಸ್ತೆಯಲ್ಲಿ ಕೂತು ಟೀ ಕುಡಿದ ಭೂಪ: ವಿಡಿಯೋ ವೈರಲ್ ಆದ ಬಳಿಕ ಯುವಕ ಅರೆಸ್ಟ್!

Untitled design 2025 04 18t084525.166

ಬೆಂಗಳೂರು, ಏಪ್ರಿಲ್ 19: ಇತ್ತೀಚಿನ ದಿನಗಳಲ್ಲಿ ಯುವಕರು-ಯುವತಿಯರು ಹಾಗೂ ವಯಸ್ಕರರು ಸೋಶಿಯಲ್‌‌ ಮೀಡಿಯಾದಲ್ಲಿ ಬಹಳ ಬೇಗ ಫೇಮಸ್‌ ಆಗಬೇಕೆಂದು ನಾನಾ ರೀತಿಯ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ. ಇದೀಗ ಅದೇ ರೀಲ್ಸ್‌ ಹುಚ್ಚಿಗೆ ಬಿದ್ದು ಪೊಲೀಸ್ ಕಣ್ಣಿಗೆ ಬಿದ್ದಿರುವ ಘಟನೆ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟ್ರೆಂಡಿಂಗ್ ರೀಲ್ಸ್ ಮಾಡಲು ರಸ್ತೆ ಮೇಲೆ ಕುರ್ಚಿ ಇಟ್ಟು ಟೀ ಕುಡಿಯುತ್ತಿದ್ದ ಟೆಂಪೋ  ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಆರೋಪಿ ರಾಮಣ್ಣ ಗಾರ್ಡನ್ ಪ್ರದೇಶದ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಎಂದು ಗುರುತಿಸಲಾಗಿದೆ. ತನ್ನ ವಿಭಿನ್ನ ಶೈಲಿಯ ವಿಡಿಯೋ ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಮೆಚ್ಚುಗೆ ಗಳಿಸಬೇಕೆಂದು ಯೋಚಿಸಿದ ಆತ, ರಸ್ತೆ ಮಧ್ಯದಲ್ಲಿ ಕುರ್ಚಿ ಹಾಕಿಕೊಂಡು ಟೀ ಕುಡಿಯುತ್ತಿರುವ ವಿಡಿಯೋವನ್ನು ಶೂಟ್ ಮಾಡಿಸಿದ್ದ. ಈ ವಿಡಿಯೋ ತೆಗೆದು ಹರಿಬಿಟ್ಟ ನಂತರ ವೈರಲ್‌ ಆಗಿದೆ.

ಈ ಘಟನೆ ನಡೆದ ಸ್ಥಳವು ಸಾರ್ವಜನಿಕ ವಾಹನಗಳ ನಿರಂತರ ಓಡಾಟವಿರುವ ಪ್ರದೇಶವಾಗಿದ್ದು, ಪ್ರಶಾಂತ್‌ನ ಈ ಕ್ರಮವು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಜೆ.ಪಾರ್ಕ್ ಠಾಣೆಯ ಪೊಲೀಸರು, ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟುಮಾಡಿದ ಆರೋಪದ ಮೇರೆಗೆ ಪ್ರಶಾಂತ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದರು. ನಂತರ, ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು.

ಪೊಲೀಸರು ಪ್ರಶಾಂತ್‌ಗೆ ಮುಚ್ಚಳಿಕೆಯನ್ನು ನೀಡಿದ್ದು, ಇಂತಹ ಕಾರ್ಯಗಳಲ್ಲಿ ಭಾಗವಹಿಸುವುದನ್ನು ಮುಂದಿನ ದಿನಗಳಲ್ಲಿ ಮುಂದುವರೆಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಶಾಂತ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿದ್ದು, ಟೆಂಪೋ ಓಡಿಸುವುದನ್ನು ತನ್ನ ಜೀವನೋಪಾಯವಾಗಿಸಿಕೊಂಡಿದ್ದನು. ಆದರೆ, ರೀಲ್ಸ್ ಹುಚ್ಚಿಗೆ ಈಗ ಮೈ ಮೇಲೆ ಕೇಸ್ ಹಾಕಿಸಿಕೊಂಡು ಆತ ಸಂಕಷ್ಟ ಎದುರಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Exit mobile version