ಟ್ರಾಪಿಕ್‌ ಜಾಮ್‌ನಲ್ಲಿ ವಿಶ್ವದಲ್ಲೇ 2ನೇ ಸ್ಥಾನ ಪಡೆದ ಬೆಂಗಳೂರು

Untitled design 2026 01 22T161008.683

ಬೆಂಗಳೂರು: ಜಾಗತಿಕ ಮಟ್ಟದ ಸಂಚಾರ ದತ್ತಾಂಶ ವಿಶ್ಲೇಷಿಸುವ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ (TomTom Traffic Index) ಬಿಡುಗಡೆ ಮಾಡಿರುವ 2025ರ ವರದಿಯ ಪ್ರಕಾರ, ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿ ಹೊರಹೊಮ್ಮಿದೆ. ಮೆಕ್ಸಿಕೋ ಸಿಟಿ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ಬೆಂಗಳೂರು ಎರಡನೇ ಸ್ಥಾನ ಪಡೆದು ಆತಂಕ ಮೂಡಿಸಿದೆ.

10 ಕಿ.ಮೀ ಕ್ರಮಿಸಲು 36 ನಿಮಿಷ, ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಕೇವಲ 10 ಕಿಲೋ ಮೀಟರ್ ದೂರವನ್ನು ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್‌ ಬೇಕಾಗುತ್ತದೆ. 2024ಕ್ಕೆ ಹೋಲಿಸಿದರೆ ಪ್ರಯಾಣದ ಸಮಯ ಸುಮಾರು 2 ನಿಮಿಷಗಳಷ್ಟು ಹೆಚ್ಚಾಗಿದೆ. ಇನ್ನು ಪೀಕ್ ಅವರ್ ಅಥವಾ ಜನ ದಟ್ಟಣೆಯ ಸಮಯದಲ್ಲಿ ವಾಹನಗಳ ವೇಗ ಗಂಟೆಗೆ ಕೇವಲ 13 ಕಿ.ಮೀಗೆ ಕುಸಿಯುತ್ತದೆ. ಅಂದರೆ, ನೀವು ಐಷಾರಾಮಿ ಕಾರಿನಲ್ಲಿ ಕುಳಿತಿದ್ದರೂ ಸೈಕಲ್ ಸವಾರನಿಗಿಂತ ನಿಧಾನವಾಗಿ ಚಲಿಸುತ್ತೀರಿ ಎಂದರ್ಥ.

ವರ್ಷದಲ್ಲಿ 7 ದಿನ ಟ್ರಾಫಿಕ್‌ಗೇ ಮೀಸಲು

ಈ ವರದಿಯ ಅತ್ಯಂತ ಆಘಾತಕಾರಿ ಅಂಶವೆಂದರೆ ಸಮಯದ ವ್ಯರ್ಥ. ಬೆಂಗಳೂರಿನ ಒಬ್ಬ ಸಾಮಾನ್ಯ ವಾಹನ ಸವಾರ ವರ್ಷವೊಂದರಲ್ಲಿ ಬರೋಬ್ಬರಿ 168 ಗಂಟೆಗಳನ್ನು (ಅಂದರೆ ಸುಮಾರು 7 ದಿನ 40 ನಿಮಿಷ) ಕೇವಲ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವ್ಯರ್ಥ ಮಾಡುತ್ತಿದ್ದಾನೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜನರು ಹೆಚ್ಚುವರಿಯಾಗಿ 12 ಗಂಟೆಗಳನ್ನು ರಸ್ತೆಯಲ್ಲೇ ಕಳೆಯುತ್ತಿದ್ದಾರೆ. ಇದು ಜನರ ಮಾನಸಿಕ ಆರೋಗ್ಯ ಮತ್ತು ನಗರದ ಉತ್ಪಾದಕತೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.

ಟಾಪ್ 5 ನಗರಗಳ ಪಟ್ಟಿ:

  1. ಮೆಕ್ಸಿಕೋ ಸಿಟಿ (ಮೆಕ್ಸಿಕೋ)

  2. ಬೆಂಗಳೂರು (ಭಾರತ)

  3. ಡಬ್ಲಿನ್ (ಐರ್ಲೆಂಡ್)

  4. ಲೋಜ್ (ಪೋಲೆಂಡ್)

  5. ಪುಣೆ (ಭಾರತ)

ಜಾಗತಿಕ ಮಟ್ಟದ ಟಾಪ್ 35 ದಟ್ಟಣೆಯ ನಗರಗಳ ಪಟ್ಟಿಯಲ್ಲಿ ಭಾರತದ 7 ನಗರಗಳು ಸ್ಥಾನ ಪಡೆದಿವೆ. ಬೆಂಗಳೂರು ಮತ್ತು ಪುಣೆ ಟಾಪ್ 5 ರಲ್ಲಿದ್ದರೆ, ಮುಂಬೈ (18), ನವದೆಹಲಿ (23), ಕೋಲ್ಕತ್ತಾ (29), ಜೈಪುರ (30) ಮತ್ತು ಚೆನ್ನೈ (32) ಕೂಡ ಈ ಪಟ್ಟಿಯಲ್ಲಿದೆ.

ವರದಿಯ ಪ್ರಕಾರ, 2025ರ ಮೇ 17 ನಗರದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಟ್ರಾಫಿಕ್ ದಿನವಾಗಿತ್ತು. ಅಂದು ಸಂಚಾರ ದಟ್ಟಣೆಯ ಮಟ್ಟ ಶೇ. 101 ಕ್ಕೆ ತಲುಪಿ ಇಡೀ ನಗರವೇ ಸ್ತಬ್ಧವಾಗಿತ್ತು. ಟಾಮ್‌ಟಾಮ್ ಸಂಸ್ಥೆಯು ವಿಶ್ವದ 3.65 ಟ್ರಿಲಿಯನ್ ಕಿಲೋ ಮೀಟರ್ ಪ್ರಯಾಣದ ದತ್ತಾಂಶವನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಿದೆ.

Exit mobile version