ಬೆಂಗಳೂರಿನಲ್ಲಿ ಮಹಾಮಳೆ: ವಿದ್ಯುತ್ ಶಾಕ್‌ನಿಂದ ಇಬ್ಬರು ಬಲಿ

Untitled design 2025 05 19t224141.262

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಳೆಯಿಂದ ದುರಂತಗಳ ಸರಪಳಿ ಮುಂದುವರೆದಿದೆ. ಭಾರೀ ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದ ಘಟನೆಯ ಬೆನ್ನಲ್ಲೇ, ಮಳೆ ನೀರು ತೆರವು ಮಾಡುವ ವೇಳೆ ವಿದ್ಯುತ್ ಶಾಕ್‌ನಿಂದ 9 ವರ್ಷದ ಬಾಲಕ ಮತ್ತು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಿಟಿಎಂ ಲೇಔಟ್‌ನ ಎರಡನೇ ಹಂತದ ಎನ್‌ಎಸ್ ಪಾಳ್ಯದ ಮಧುವನ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ದುರ್ಘಟನೆಯ ವಿವರ

ಈ ಘಟನೆಯಲ್ಲಿ ಮೃತರನ್ನು ದಿನೇಶ್ (9 ವರ್ಷ) ಮತ್ತು ಮನೋಹರ್ ಕಾಮತ್ (55 ವರ್ಷ) ಎಂದು ಗುರುತಿಸಲಾಗಿದೆ. ಭಾರೀ ಮಳೆಯಿಂದ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ನೀರು ಸಂಗ್ರಹವಾಗಿ ಜಲಾವೃತವಾಗಿತ್ತು. ಈ ನೀರನ್ನು ಮೋಟಾರ್ ಬಳಸಿ ತೆರವುಗೊಳಿಸಲು ಯತ್ನಿಸುವಾಗ ವಿದ್ಯುತ್ ಶಾಕ್‌ಗೆ ಒಳಗಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಮಾಹಿತಿ ಪಡೆದ ಮೈಕೋ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಅಪಾರ್ಟ್‌ಮೆಂಟ್‌ಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಅವಾಂತರ

ನಗರದಲ್ಲಿ ಶನಿವಾರ ಮಧ್ಯಾಹ್ನದಿಂದ ಸುರಿದ ಭಾರೀ ಮಳೆಯಿಂದ ಬೃಹತ್ ಬೆಂಗಳೂರು ನಲುಗಿ ಹೋಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಕಾರ, ಶನಿವಾರ ರಾತ್ರಿ ಸರಾಸರಿ 103 ಮಿಮೀ ಮಳೆ ದಾಖಲಾಗಿದ್ದು, ಕಳೆದ ಒಂದು ದಶಕದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತ್ಯಧಿಕ ಮಳೆ ಇದಾಗಿದೆ. ಈ ಮಳೆಯಿಂದ ನಗರದಾದ್ಯಂತ ಸಾಲು ಸಾಲು ಸಮಸ್ಯೆಗಳು ಎದುರಾಗಿವೆ.

ಮಳೆಯಿಂದ ಉಂಟಾದ ಹಾನಿ

ಬಿಬಿಎಂಪಿ ವರದಿಯ ಪ್ರಕಾರ, ನಗರದ ವಿವಿಧ ಭಾಗಗಳಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ಮಳೆ ಮತ್ತು ಚರಂಡಿ ನೀರು ನುಗ್ಗಿದೆ. ಇದರಿಂದಾಗಿ 5 ಜಾನುವಾರುಗಳು (3 ಹಸು, 1 ಕರು, 1 ಎಮ್ಮೆ) ಮತ್ತು 1 ಸಾಕು ನಾಯಿ ಸಾವನ್ನಪ್ಪಿವೆ. ಜೊತೆಗೆ, 27 ಮರಗಳು ಧರೆಗುರುಳಿದ್ದು, 43 ಮರದ ಕೊಂಬೆಗಳು ಮುರಿದು ಬಿದ್ದಿವೆ. ಕಾಂಪೌಂಡ್ ಗೋಡೆ ಕುಸಿತದಿಂದ ಓರ್ವ ಮಹಿಳೆಯ ಸಾವೂ ಸೇರಿದಂತೆ, ಈ ಮಳೆಯಿಂದ ನಗರದಲ್ಲಿ ಒಟ್ಟು ಮೂವರು ಬಲಿಯಾಗಿದ್ದಾರೆ.

Exit mobile version