ರಾಜ್ಯದಲ್ಲಿ ಮಳೆ ಅಬ್ಬರ: ಸಿಲಿಕಾನ್‌ ಸಿಟಿ ರಸ್ತೆಗಳು ಜಲಾವೃತ

Untitled design 2025 04 04t080009.029

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದೆ. ದಿಢೀರ್ ಆಗಿ ಮೋಡಮೂಡಿದ ವಾತಾವರಣದಲ್ಲಿ ಭಾರೀ ಮಳೆಯಾಗಿದ್ದು, ನಗರದ ಹಲವಾರು ಭಾಗಗಳಲ್ಲಿ ರಸ್ತೆಗಳು ಜಲಮಯವಾಗಿವೆ.

ಕೆ.ಆರ್.ಪುರಂ, ಮಹದೇವಪುರ, ಸರ್ಜಾಪುರ, ವೈಟ್‌ಫೀಲ್ಡ್, ಹೆಚ್‌ಎಎಲ್, ಈಜಿಪುರ, ಬಿಟಿಎಂ ಲೇಔಟ್, ತಾವರೆಕೆರೆ, ಗೊರಗುಂಟೆಪಾಳ್ಯ ಸೇರಿದಂತೆ ಪ್ರಮುಖ ವಹಿವಾಟು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೀವ್ರ ಅಡಚಣೆ ಉಂಟಾಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದ ಘಟನೆಗಳು ಈಜಿಪುರ ಹಾಗೂ ಕಸವನಹಳ್ಳಿಯಲ್ಲಿ ವರದಿಯಾಗಿವೆ. ರಾಜಾಜಿನಗರದಲ್ಲಿ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿವೆ.

ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ರಸ್ತೆ ಅಗೆದಿರುವುದು, ಅಪೂರ್ಣ ವೈಟ್‌ಟಾಪಿಂಗ್ ಕಾಮಗಾರಿ ಹಾಗೂ ಕಾಲುವೆಗಳ ಸ್ವಚ್ಛತೆ ಕೊರತೆಯು ಈ ಪರಿಸ್ಥಿತಿಗೆ ಕಾರಣವೆನಿಸುತ್ತದೆ.

ಚಿಕ್ಕಮಗಳೂರು, ಹಾಸನದಲ್ಲಿ ಭಾರೀ ಮಳೆ

ನಗರವಲ್ಲದೆ ಗ್ರಾಮೀಣ ಭಾಗಗಳಲ್ಲೂ ಮಳೆ ಅಬ್ಬರಿಸುತ್ತಿದೆ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಗಳ ಮೇಲೆ ನೀರು ಹರಿದು ಅಂಗಡಿಗಳಿಗೆ ನುಗ್ಗಿದೆ. ಬೆಳಗಾವಿಯ ಚಿಕ್ಕೋಡಿ, ಚಿತ್ರದುರ್ಗ, ಕೋಲಾರ, ಹೊಸಪೇಟೆ ಸೇರಿದಂತೆ ಹಲವೆಡೆ ಮಳೆ ಮುಂದುವರೆದಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳ ಚುರುಕುಗೊಳ್ಳುವಿಕೆಯಿಂದ ಮುಂದಿನ ಕೆಲವು ದಿನಗಳು ರಾಜ್ಯದ ಬಹುಪಾಲು ಭಾಗಗಳಲ್ಲಿ ಭಾರೀ ಗಾಳಿ ಸಹಿತ ಮಳೆ ಮುಂದುವರಿಯಲಿದೆ. ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಮೊದಲ ಮಳೆ 

ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಮೊದಲ ಭಾರೀ ಮಳೆಯಾಗಿದೆ.  ಚದಲಪುರ, ಗೌರಿಬಿದನೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬಿಸಿಲಿನಿಂದ ಬಳಲುತ್ತಿದ್ದ ಜನತೆಗೆ ತಂಪು ನೀಡಿದ ಈ ಮಳೆ ರೈತರ ಮುಖದಲ್ಲೂ ನಗು ಮೂಡಿಸಿದೆ. ಚದಲಪುರ ವೃತ್ತದ ಬಳಿಯ ಹೆದ್ದಾರಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.

ತುಮಕೂರಿಗೂ ಮಳೆ 

ತುಮಕೂರಿನಲ್ಲೂ ಗುರುವಾರ ಮಧ್ಯಾಹ್ನ 2:30ರಿಂದ 3:00 ಗಂಟೆವರೆಗೆ ಧಾರಾಕಾರ ಮಳೆಯಾಗಿದ್ದು, ಜನರಿಗೆ ಬೇಸಿಗೆಯ ಬಿಸಿಲಿನಿಂದ ತಾತ್ಕಾಲಿಕ ಬಿಡುವು ಸಿಕ್ಕಂತಾಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದ ಕಾರಣ ಮಳೆಯಾದ ಸಂದರ್ಭದಲ್ಲಿ ಜನತೆ ನಿರಾಳಗೊಂಡರು.

ಬೀದರ್‌ ಜಿಲ್ಲೆಯ ಮಳೆ 

ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯೂ ಅಕಾಲಿಕ ಮಳೆಯಿಂದ ತಂಪೆರೆದುಹೊಗಿದೆ. ಬಿರುಗಾಳಿ, ಗುಡುಗು ಹಾಗೂ ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಬೀದರ್ ನಗರ ಹಾಗೂ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಕಾಲ ವರುಣನ ಅಬ್ಬರಿಸಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version