ಬೆಂಗಳೂರಿನ ಮಹಾಮಳೆಗೆ ಮತ್ತೊಂದು ಬಲಿ: ಮರ ಉರುಳಿಬಿದ್ದು ವ್ಯಕ್ತಿ ಸಾವು

Untitled design 2025 05 21t193730.001

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಸುರಿಯುತ್ತಿದ್ದು, ನಗರದಲ್ಲಿ ಈ ಮಳೆಗೆ ಇನ್ನೊಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಕೋರಮಂಗಲದ ಸೌಭಾಗ್ಯ ಸ್ಟೋರ್ ಬಳಿ ಘಟನೆ ಸಂಭವಿಸಿದ್ದು, ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಮರ ಉರುಳಿ ಬಿದ್ದ ಪರಿಣಾಮ 50 ವರ್ಷದ ಮೂಡಲಗಿರಿ ಎಂಬುವವರು ಸಾವನ್ನಪ್ಪಿದ್ದಾರೆ.

ಕೋರಮಂಗಲದಲ್ಲಿ ದುರಂತ

ಕೋರಮಂಗಲದ ಸೌಭಾಗ್ಯ ಸ್ಟೋರ್ ಬಳಿಯ ರಸ್ತೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ರಸ್ತೆಯ ಬದಿಯಲ್ಲಿದ್ದ ದೊಡ್ಡ ಮರವೊಂದು ಕುಸಿದು, ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಮೂಡಲಗಿರಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಇದಕ್ಕೂ ಮುಂಚೆಯೂ ಮೂರು ಜನರು ಜೀವ ಕಳೆದುಕೊಂಡಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಮನೆಯ ಗೋಡೆ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿದ್ದರೆ, ಬಿಟಿಎಂ ಲೇಔಟ್‌ನ ಮಧುವನ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ನೀರು ಹೊರಹಾಕುವಾಗ ವಿದ್ಯುತ್ ಶಾಕ್‌ಗೆ ಒಳಗಾಗಿ ಇಬ್ಬರು ಮೃತಪಟ್ಟಿದ್ದರು.

ಕಳೆದ ಕೆಲವು ದಿನಗಳಿಂದ ಬೆಂಗಳೂರು ಭಾರೀ ಮಳೆಯಿಂದ ತತ್ತರಿಸಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕೆಲವೆಡೆ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ.

Exit mobile version