ಬೆಂಗಳೂರು: ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಬ್ಬರ ಜೋರಾಗಿದ್ದರೆ, ಮತ್ತೊಂದೆಡೆ ಕಳ್ಳರ ಕೈಚಳಕವೂ ಜೋರಾಗಿದೆ. ಇತ್ತೀಚೆಗೆ ನಡೆದ ಆರ್‌ಸಿಬಿ (RCB) ಮತ್ತು ಎಸ್‌ಆರ್‌ಹೆಚ್ (SRH) ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಅಭಿಮಾನಿಗಳ ಮೊಬೈಲ್ ಕದ್ದಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಭೇದಿಸಿದ್ದಾರೆ. ಕೇವಲ ಎರಡೇ ದಿನದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಸುಮಾರು 18 ಲಕ್ಷ ರೂಪಾಯಿ ಮೌಲ್ಯದ 28 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಶನಿವಾರ (ಮಾರ್ಚ್ 28) ನಡೆದ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಹರಿದುಬಂದಿದ್ದರು. ಈ ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಅಭಿಮಾನಿಗಳು ಪಂದ್ಯದ ಗುಂಗಿನಲ್ಲಿದ್ದಾಗ ಬೆಲೆಬಾಳುವ ಮೊಬೈಲ್‌ಗಳನ್ನು ಎಗರಿಸಿದ್ದರು. ಪಂದ್ಯ ಮುಗಿದು ಹೊರಬರುವಾಗ ಫೋನ್ ಇಲ್ಲದಿರುವುದನ್ನು ಗಮನಿಸಿದ ಹಲವು ಅಭಿಮಾನಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಕಲಿಸಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 12 ಎಫ್‌ಐಆರ್ (FIR) ದಾಖಲಾಗಿದ್ದವು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ, ಓರ್ವ ಪ್ರಮುಖ ಆರೋಪಿ ಹಾಗೂ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ , ಈ ಗ್ಯಾಂಗ್ ಉದ್ದೇಶಪೂರ್ವಕವಾಗಿಯೇ ಜನಜಂಗುಳಿ ಸೇರುವ ಜಾಗಗಳನ್ನು ಟಾರ್ಗೆಟ್ ಮಾಡುತ್ತದೆ. ಪೊಲೀಸರ ಕಣ್ಣಿಗೆ ಮಣ್ಣೆರಚಲು ಮತ್ತು ಅನುಮಾನ ಬರದಂತೆ ತಡೆಯಲು ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಕಳ್ಳತನ ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಎಫ್‌ಐಆರ್ ದಾಖಲಾದ ಕೇವಲ 48 ಗಂಟೆಗಳ ಒಳಗಾಗಿ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ವಶಪಡಿಸಿಕೊಂಡ 28 ಮೊಬೈಲ್‌ಗಳಲ್ಲಿ ಐಫೋನ್ ಸೇರಿದಂತೆ ಹಲವು ದುಬಾರಿ ಕಂಪನಿಗಳ ಫೋನ್‌ಗಳಿವೆ. ಇವುಗಳ ಒಟ್ಟು ಮೌಲ್ಯ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
