ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಹಳದಿ ಮಾರ್ಗದ ಮೆಟ್ರೋಗೆ ನಾಳೆ 6ನೇ ರೈಲು ಸೇರ್ಪಡೆ

Untitled design 2025 12 22T205725.429

ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗ (Yellow Line) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL)  ದೊಡ್ಡ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 23ರ ಮಂಗಳವಾರದಿಂದ ಹಳದಿ ಮಾರ್ಗದಲ್ಲಿ ಆರನೇ ಚಾಲಕರಹಿತ ಮೆಟ್ರೋ ರೈಲು ಪ್ರಯಾಣಿಕರ ಸೇವೆಗೆ ಸೇರ್ಪಡೆಯಾಗಲಿದೆ. ಈ ಹೊಸ ಸೇರ್ಪಡೆಯಿಂದ ಪ್ರಯಾಣಿಕರು ಕಾಯುವ ಸಮಯ ಕಡಿಮೆಯಾಗಲಿದೆ.

ಹಳದಿ ಮಾರ್ಗದಲ್ಲಿ ಸೋಮವಾರದಿಂದ ಶನಿವಾರದವರೆಗೆ ಪೀಕ್ ಅವಧಿಯಲ್ಲಿ ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಸಂಚರಿಸುತ್ತಿವೆ. ಆದರೆ ಆರನೇ ರೈಲು ಸೇರ್ಪಡೆಯಾದ ಬಳಿಕ ಈ ಅವಧಿ 13 ನಿಮಿಷಗಳಿಗೆ ಇಳಿಕೆಯಾಗಲಿದೆ. ಭಾನುವಾರಗಳಲ್ಲಿ ಮಾತ್ರ ಪೀಕ್ ಅವಧಿಯ ಸೇವೆಗಳು 15 ನಿಮಿಷಗಳ ಅಂತರದಲ್ಲಿಯೇ ಮುಂದುವರಿಯಲಿವೆ. ಈ ಬದಲಾವಣೆಯಿಂದ ದಟ್ಟಣೆಯ ಸಮಯದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ನಿಲ್ದಾಣಗಳಿಂದ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈಗಿನಂತೆಯೇ ತಮ್ಮ ಪ್ರಯಾಣವನ್ನು ಯೋಜಿಸಬಹುದು. ಈ ಸುಧಾರಣೆಯು ದಕ್ಷಿಣ ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮಸಂದ್ರದವರೆಗಿನ ಪ್ರಯಾಣಿಕರಿಗೆ ವಿಶೇಷ ಅನುಕೂಲ ಕಲ್ಪಿಸಲಿದೆ.

ಹಳದಿ ಮಾರ್ಗವು ಆಗಸ್ಟ್ 10, 2025ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿತ್ತು. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸುಮಾರು 19.15 ಕಿ.ಮೀ. ಉದ್ದದ ಈ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದೆ. ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣಗಳು ರಸ್ತೆ ಮತ್ತು ರೈಲು ಫ್ಲೈಓವರ್‌ನೊಂದಿಗೆ ನಿರ್ಮಿತವಾಗಿವೆ. ಈ ಮಾರ್ಗವು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಂಗಳೂರಿನ ಐಟಿ ಕಾರಿಡಾರ್‌ಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.

ಹಳದಿ ಮಾರ್ಗದ ವಿಶೇಷತೆಯೆಂದರೆ ಇದು ಸಂಪೂರ್ಣ ಚಾಲಕರಹಿತ (Driverless) ರೈಲುಗಳನ್ನು ಬಳಸುವ ಮೊದಲ ಮಾರ್ಗ.  ಉದ್ಘಾಟನೆಯ ನಂತರ ಕೇವಲ ಕೆಲವು ತಿಂಗಳುಗಳಲ್ಲೇ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಾರಾಂತ್ಯದಲ್ಲಿ 80,000ಕ್ಕೂ ಹೆಚ್ಚು ಪ್ರಯಾಣಿಕರು ಈ ಮಾರ್ಗವನ್ನು ಬಳಸುತ್ತಿದ್ದಾರೆ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಈ ಮಾರ್ಗ ಅನುಕೂಲಕರವಾಗಿದೆ.

ಬಿಎಂಆರ್‌ಸಿಎಲ್ ನಿರಂತರವಾಗಿ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಉದ್ಘಾಟನೆಯ ಸಮಯದಲ್ಲಿ ಕೇವಲ ಮೂರು ರೈಲುಗಳೊಂದಿಗೆ ಆರಂಭವಾದ ಸೇವೆಯು ಈಗ ಐದು ರೈಲುಗಳೊಂದಿಗೆ ನಡೆಯುತ್ತಿದೆ. ಆರನೇ ರೈಲು ಸೇರ್ಪಡೆಯಾದ ಬಳಿಕ ಸೇವೆಯ ಗುಣಮಟ್ಟ ಇನ್ನಷ್ಟು ಸುಧಾರಿಸಲಿದೆ.

Exit mobile version