ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್: IPL ಪಂದ್ಯ ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ

Untitled design 2026 03 25T220301.549

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಿಗಾಗಿ ದೊಡ್ಡ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಮಾರ್ಚ್ 28ರಂದು ನಡೆಯಲಿರುವ ಟಾಟಾ ಐಪಿಎಲ್ ಟಿ-20 ಪಂದ್ಯವನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ಸೇವೆಗಳನ್ನು ವಿಸ್ತರಿಸಿದೆ. ಪಂದ್ಯ ಮುಗಿದ ಬಳಿಕವೂ ಅಭಿಮಾನಿಗಳು ಸುಲಭವಾಗಿ ಮನೆ ತಲುಪುವಂತೆ, ಮೆಟ್ರೋ ಸಂಚಾರವನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಈ ಕ್ರಮವು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ, ಸಾವಿರಾರು ಅಭಿಮಾನಿಗಳಿಗೆ ಸುರಕ್ಷಿತ ಮತ್ತು ವೇಗವಾದ ಪ್ರಯಾಣವನ್ನು ಒದಗಿಸುವ ಉದ್ದೇಶ ಹೊಂದಿದೆ. ಸಾಮಾನ್ಯವಾಗಿ ರಾತ್ರಿ 11ರೊಳಗೆ ಕೊನೆಯ ರೈಲು ಸೇವೆ ಮುಗಿಯುತ್ತಿದ್ದರೆ, ಪಂದ್ಯ ದಿನ ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಸೇವೆ ಮುಂದುವರಿಯಲಿದೆ.

ಬಿಎಂಆರ್‌ಸಿಎಲ್ ನೀಡಿದ ಮಾಹಿತಿಯಂತೆ, ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳ ವೇಳಾಪಟ್ಟಿ ಈ ರೀತಿಯಾಗಿದೆ. ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ ರಾತ್ರಿ 12.30ಕ್ಕೆ, ಚಲ್ಲಘಟ್ಟದಿಂದ 12.45ಕ್ಕೆ ರೈಲುಗಳು ಹೊರಡಲಿವೆ. ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾಗೂ ಮಾದಾವರ ನಿಲ್ದಾಣಗಳಿಂದಲೂ 12.45ಕ್ಕೆ ಸೇವೆ ಲಭ್ಯವಿದ್ದು, ಬೊಮ್ಮಸಂದ್ರದಿಂದ ರಾತ್ರಿ 1 ಗಂಟೆಗೆ ಮತ್ತು 2ನೇ ಆರ್‌ವಿ ರಸ್ತೆ ನಿಲ್ದಾಣದಿಂದ ಮುಂಜಾನೆ 2 ಗಂಟೆಗೆ ಕೊನೆಯ ರೈಲು ಹೊರಡಲಿದೆ.

ನಗರದ ಪ್ರಮುಖ ಜಂಕ್ಷನ್ ಆಗಿರುವ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣದಿಂದ ನಾಲ್ಕು ದಿಕ್ಕುಗಳತ್ತ ಕೊನೆಯ ರೈಲುಗಳು ಬೆಳಿಗ್ಗೆ 1.30ಕ್ಕೆ ಸಂಚರಿಸಲಿವೆ. ಇದರಿಂದ ನಗರದ ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳಿಗೆ ಮನೆ ತಲುಪುವುದು ಇನ್ನಷ್ಟು ಸುಲಭವಾಗಲಿದೆ.

ಇನ್ನೂ ಒಂದು ವಿಶೇಷ ಸೌಲಭ್ಯವೆಂದರೆ, ಐಪಿಎಲ್ ಪಂದ್ಯ ಟಿಕೆಟ್‌ಗಳಲ್ಲಿಯೇ ದ್ವಿಮುಖ (ಟು-ವೇ) ಮೆಟ್ರೋ ಪ್ರಯಾಣಕ್ಕೆ ಅನುಕೂಲವಾಗುವ ಕ್ಯೂಆರ್ ಕೋಡ್ ನೀಡಲಾಗುತ್ತಿದೆ. ಅಭಿಮಾನಿಗಳು ಈ ಕ್ಯೂಆರ್ ಕೋಡ್ ಬಳಸಿ ಸುಲಭವಾಗಿ ಮೆಟ್ರೋ ಪ್ರವೇಶಿಸಿ, ಹೊರಬರಬಹುದು. ಇದರಿಂದ ಟಿಕೆಟ್ ಕೌಂಟರ್‌ಗಳ ಬಳಿ ಉಂಟಾಗುವ ಗೊಂದಲವೂ ಕಡಿಮೆಯಾಗಲಿದೆ.

ಕ್ರೀಡಾಂಗಣಕ್ಕೆ ಪ್ರವೇಶಿಸುವ ದ್ವಾರಗಳ ಆಧಾರದ ಮೇಲೆ, ಪ್ರಯಾಣಿಕರು ಸೂಕ್ತ ಮೆಟ್ರೋ ನಿಲ್ದಾಣಗಳನ್ನು ಬಳಸಬೇಕೆಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಕಬ್ಬನ್ ರಸ್ತೆಯ ಪ್ರವೇಶ ದ್ವಾರಗಳಿಗೆ ಹೋಗುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಬೇಕು. ಹಾಗೆಯೇ ಲಿಂಕ್ ರಸ್ತೆಯ ಪ್ರವೇಶ ದ್ವಾರಗಳಿಗೆ ಹೋಗುವವರು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವುದು ಅನುಕೂಲಕರ.

ಪಂದ್ಯದ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ ರೂ.30 ಮತ್ತು ಕಾರುಗಳಿಗೆ ರೂ.60 ನಿಗದಿತ ದರದಲ್ಲಿ ಪಾರ್ಕಿಂಗ್ ಸೌಲಭ್ಯ ಲಭ್ಯವಿರುತ್ತದೆ. ಈ ದರಗಳು ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾನ್ಯವಾಗುತ್ತವೆ.

ಅಭಿಮಾನಿಗಳು ತಮ್ಮ ವಾಹನಗಳನ್ನು ಸಮೀಪದ ಮೆಟ್ರೋ ನಿಲ್ದಾಣಗಳಲ್ಲಿ ನಿಲ್ಲಿಸಿ, ಮೆಟ್ರೋ ಮೂಲಕ ಕಬ್ಬನ್ ಪಾರ್ಕ್ ಅಥವಾ ಎಂಜಿ ರಸ್ತೆ ನಿಲ್ದಾಣಗಳಿಗೆ ತೆರಳಿ ಅಲ್ಲಿಂದ ನಡೆದುಕೊಂಡು ಕ್ರೀಡಾಂಗಣ ತಲುಪುವಂತೆ ಸೂಚಿಸಲಾಗಿದೆ. ಇದರಿಂದ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಉಂಟಾಗುವ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಬಹುದು.

Exit mobile version