ಮಸಾಜ್ ಪಾರ್ಲರ್ ಕೆಲಸದ ಮೇಲೆ ಅನುಮಾನ ಪಟ್ಟು ಕುತ್ತಿಗೆ ಸೀಳಿದ ಪತಿ !

Untitled design 2025 12 27T124444.210

ಬೆಂಗಳೂರು: ರಾಜಧಾನಿಯ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಯಾನಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯ ವೃತ್ತಿಯ ಬಗ್ಗೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅಗ್ರಹಾರ ಲೇಔಟ್‌ನಲ್ಲಿ ನಡೆದ ಈ ಘಟನೆಯಲ್ಲಿ 39 ವರ್ಷದ ಆಯೇಷಾ ಸಿದ್ದಿಕಿ ಮೃತಪಟ್ಟ ಮಹಿಳೆ. ಆರೋಪಿ ಪತಿ ಸೈಯ್ಯದ್ ಜಬಿ ಸ್ವತಃ ಠಾಣೆಗೆ ಬಂದು ಶರಣಾಗಿದ್ದಾನೆ.

ಆಯೇಷಾ ಸಿದ್ದಿಕಿ ನಗರದ ಮಸಾಜ್ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವುದು ಸೈಯ್ಯದ್ ಜಬಿಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ಆಕೆ ವೃತ್ತಿಯ ಬಗ್ಗೆ ಪತಿಗೆ ತೀವ್ರ ಆಕ್ಷೇಪವಿತ್ತು ಮತ್ತು ಆಯೇಷಾ ನಡತೆಯ ಮೇಲೆ ಸೈಯ್ಯದ್ ನಿರಂತರವಾಗಿ ಅನುಮಾನ ಪಡುತ್ತಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು.

ಅಪರಾಧ ಹೇಗೆ ನಡೆಯಿತು

ಡಿಸೆಂಬರ್ 26ರ ರಾತ್ರಿ ದಂಪತಿಗಳ ನಡುವೆ ಇದೇ ಕೆಲಸದ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಕೆಲಸ ಬಿಡು ಎಂದು ಪತಿ ಪಟ್ಟು ಹಿಡಿದರೆ, ಆಯೇಷಾ ಅದನ್ನು ವಿರೋಧಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸೈಯ್ಯದ್ ಜಬಿ, ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಆಯೇಷಾ ಕುತ್ತಿಗೆಯನ್ನು ಸೀಳಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಯೇಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಯೇಷಾಗೆ ಇದು 3ನೇ ಮದುವೆ

ಈ ದಂಪತಿಗಳ ವೈವಾಹಿಕ ಜೀವನದ ಹಿನ್ನೆಲೆ ಕೂಡ ವಿಭಿನ್ನವಾಗಿದೆ. ಮೃತ ಆಯೇಷಾ ಸಿದ್ದಿಕಿಗೆ ಇದು ಮೂರನೇ ಮದುವೆಯಾಗಿತ್ತು. ಇತ್ತ ಆರೋಪಿ ಸೈಯ್ಯದ್ ಜಬಿಗೆ ಇದು ಎರಡನೇ ಮದುವೆಯಾಗಿತ್ತು. ಸುಮಾರು ಮೂರು ತಿಂಗಳ ಹಿಂದಷ್ಟೇ ಈ ಇಬ್ಬರೂ ವಿವಾಹವಾಗಿದ್ದರು.

ಪೊಲೀಸರ ಕ್ರಮ:

ಪತ್ನಿಯನ್ನು ಹತ್ಯೆ ಮಾಡಿದ ನಂತರ ರಕ್ತಸಿಕ್ತ ಬಟ್ಟೆಯಲ್ಲೇ ಸೈಯ್ಯದ್ ಜಬಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಕೂಡಲೇ ಆತನನ್ನು ಬಂಧಿಸಿ, ಘಟನಾ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದಾರೆ. ಪತ್ನಿಯ ನಸಾಜ್‌ ಪಾರ್ಲರ್‌ ಕೆಲಸ ಮತ್ತು ನಡತೆಯ ಮೇಲೆ ಉಂಟಾದ ಅನುಮಾನವೇ ಈ ಹತ್ಯೆಗೆ ಮೂಲ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Exit mobile version