ದೀಪಾವಳಿ ಗಿಫ್ಟ್‌: ಬೆಂಗಳೂರು-ಹುಬ್ಬಳ್ಳಿಗೆ ಹೊಸ ಸೂಪರ್ ಫಾಸ್ಟ್ ರೈಲು ಸೇವೆ

Untitled design 2025 10 16t232313.148

ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ದೀಪಾವಳಿ ಉಡುಗೊರೆಯಾಗಿ ಹೊಸ ರೈಲು ಸೇವೆ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿ ಮಧ್ಯೆ ಡಿಸೆಂಬರ್ 8 ರಿಂದ ದೈನಂದಿನ ‘ಸೂಪರ್ ಫಾಸ್ಟ್ ವಿಶೇಷ ರೈಲು’ ಸಂಚಾರ ಆರಂಭವಾಗಲಿದೆ.

ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಪ್ರತಿದಿನ ಸಂಚರಿಸಲಿರುವ ಈ ವಿಶೇಷ ರೈಲುಗಳ ಸಂಖ್ಯೆ 20687 ಮತ್ತು 20688 ಎಸ್ ಬಿ ಸಿ ಆಗಿರುತ್ತದೆ. ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಈ ರೈಲು ಸೇವೆ ಆರಂಭಿಸಲು ಒತ್ತಾಯಿಸಿದ್ದರು.

ಈ ಸೂಪರ್ ಫಾಸ್ಟ್ ರೈಲು ಹುಬ್ಬಳ್ಳಿ, ಕರ್ಜಗಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ, ಸಂಪಿಗೆ ರೋಡ್, ತುಮಕೂರು, ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ಮಧ್ಯೆ ಸಂಚರಿಸಲಿದೆ. ಈ ಮಾರ್ಗವು ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಜೊತೆಗೆ ಮಧ್ಯ ಕರ್ನಾಟಕದ ಸಂಪರ್ಕವನ್ನು ಉತ್ತಮಪಡಿಸಲಿದೆ.

ಈ ಹೊಸ ರೈಲು ಸೇವೆಯಿಂದ ರಾಜ್ಯದ ಏಳರಿಂದ ಎಂಟು ಜಿಲ್ಲೆಗಳ ಪ್ರಯೋಣಿಕರು ಪ್ರಯೋಜನ ಪಡೆಯಲಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ರಾಜಧಾನಿ ಬೆಂಗಳೂರಿನ ಮಧ್ಯೆ ಸಂಪರ್ಕ ಉತ್ತಮವಾಗುವುದರಿಂದ ವ್ಯಾಪಾರ-ವಾಣಿಜ್ಯ, ಶೈಕ್ಷಣಿಕ ಅಭಿವೃದ್ದಿ ಮತ್ತು ಅವಕಾಶಗಳಿಗೆ ಹೆಚ್ಚಿನ ಪ್ರಯೋಜನ ಒದಗಲಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಹೊಸ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಿ. ಸೋಮಣ್ಣ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳ ನಡುವಿನ ಸಂಪರ್ಕ ಉತ್ತಮಪಡಿಸುವ ಈ ಕ್ರಮವು ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Exit mobile version