ಹೋಟೆಲ್‌ಗಳಲ್ಲಿ ಅಡುಗೆ ಅನಿಲ ಬಿಕ್ಕಟ್ಟು: ಹೆಚ್ಚು ಗ್ಯಾಸ್ ಬಳಸುವ ತಿಂಡಿಗಳಿಗೆ ಬ್ರೇಕ್

Untitled design 2026 03 11T110830.172

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮಗಳು ಈಗ ಭಾರತದ ಹೋಟೆಲ್ ಉದ್ಯಮಕ್ಕೂ ತಟ್ಟಲು ಆರಂಭಿಸಿವೆ. ವಿಶೇಷವಾಗಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಅಡುಗೆ ಅನಿಲದ ಕೊರತೆ ಎದುರಾಗಿದ್ದು, ಹಲವಾರು ಹೋಟೆಲ್‌ಗಳು ಹಾಗೂ ಊಟದ ಕೇಂದ್ರಗಳು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿವೆ. ವಾಣಿಜ್ಯ ಬಳಕೆಗೆ ಬೇಕಾಗುವ ಗ್ಯಾಸ್ ಸಿಲಿಂಡರ್ ಪೂರೈಕೆ ಕಡಿಮೆಯಾಗಿರುವುದರಿಂದ ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ಮೆನುಗಳಲ್ಲಿ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘದ ಮಾಹಿತಿಯ ಪ್ರಕಾರ, ಇತ್ತೀಚೆಗೆ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಕಡಿಮೆ ಮಾಡಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ನಗರದ ಅನೇಕ ಹೋಟೆಲ್‌ಗಳಿಗೆ ಬೇಕಾದಷ್ಟು ಸಿಲಿಂಡರ್ ದೊರೆಯದೆ ತೊಂದರೆ ಎದುರಾಗಿದೆ. ಇದರ ಪರಿಣಾಮವಾಗಿ ಹೆಚ್ಚು ಗ್ಯಾಸ್ ಬಳಕೆಯಾಗುವ ಕೆಲವು ಆಹಾರ ಪದಾರ್ಥಗಳನ್ನು ತಾತ್ಕಾಲಿಕವಾಗಿ ಮೆನುವಿನಿಂದ ತೆಗೆದುಹಾಕುವ ಕುರಿತು ಚಿಂತನೆ ನಡೆಯುತ್ತಿದೆ.

ಕರಿದ ತಿಂಡಿಗಳಿಗೆ ಬ್ರೇಕ್

ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಸಂಜೆ ವೇಳೆಯಲ್ಲಿ ಹೆಚ್ಚು ಮಾರಾಟವಾಗುವ ತಿಂಡಿಗಳಾದ ಬೋಂಡಾ, ಬಜ್ಜಿ, ಉದ್ದಿನ ವಡೆ, ಪಕೋಡ, ಗೋಬಿ ಮಂಚೂರಿಯನ್ ಹಾಗೂ ಎಣ್ಣೆಯಲ್ಲಿ ಕರಿಯುವ ಇತರ ಪದಾರ್ಥಗಳಿಗೆ ತಾತ್ಕಾಲಿಕ ಬ್ರೇಕ್ ಹಾಕುವ ಸಾಧ್ಯತೆ ಇದೆ. ಈ ತಿಂಡಿಗಳನ್ನು ತಯಾರಿಸಲು ಹೆಚ್ಚಿನ ಗ್ಯಾಸ್ ಬೇಕಾಗುತ್ತದೆ. ಈಗಾಗಲೇ ಗ್ಯಾಸ್ ಕೊರತೆ ಎದುರಾಗಿರುವ ಕಾರಣ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ನಗರದಲ್ಲಿನ ಸುಮಾರು 70 ಶೇಕಡಾ ಹೋಟೆಲ್‌ಗಳು ಈ ಸಮಸ್ಯೆಯನ್ನು ಅನುಭವಿಸುತ್ತಿವೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಕೆಲವು ಸಣ್ಣ ಹೋಟೆಲ್‌ಗಳು ಹಾಗೂ ಟಿಫಿನ್ ಕೇಂದ್ರಗಳು ಈಗಾಗಲೇ ಕೆಲವು ತಿಂಡಿಗಳನ್ನು ತಯಾರಿಸುವುದನ್ನು ನಿಲ್ಲಿಸಿರುವುದಾಗಿ ಹೇಳಲಾಗಿದೆ.

ಹೋಟೆಲ್ ಬಂದ್ ಸಾಧ್ಯತೆ

ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು ಮಾತನಾಡಿ, “ಗ್ಯಾಸ್ ಇಲ್ಲದೆ ಅಡುಗೆ ಮಾಡುವುದು ಅಸಾಧ್ಯ. ಈಗಾಗಲೇ ಅನೇಕ ಹೋಟೆಲ್‌ಗಳಿಗೆ ಬೇಕಾದಷ್ಟು ಸಿಲಿಂಡರ್ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕೆಲವು ದಿನಗಳಲ್ಲಿ ಹೋಟೆಲ್‌ಗಳನ್ನು ಸಂಪೂರ್ಣವಾಗಿ ಮುಚ್ಚುವ ಪರಿಸ್ಥಿತಿ ಎದುರಾಗಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲವು ಹೋಟೆಲ್‌ಗಳು ಗ್ಯಾಸ್ ಕೊರತೆಯನ್ನು ತಾತ್ಕಾಲಿಕವಾಗಿ ಎದುರಿಸಲು ಸಾಂಪ್ರದಾಯಿಕ ಸೌದೆ ಒಲೆಗಳ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.

ಗ್ರಾಹಕರಿಗೂ ಹೊಡೆತ

ಈ ಸಮಸ್ಯೆಯ ಪರಿಣಾಮ ಗ್ರಾಹಕರ ಮೇಲೂ ಬೀಳುವ ಸಾಧ್ಯತೆ ಇದೆ. ಸಂಜೆ ವೇಳೆ ಸಿಗುವ ಬಿಸಿ ಬಿಸಿ ತಿಂಡಿಗಳು ದೊರಕುವುದು ಕಷ್ಟವಾಗಬಹುದು. ಗ್ಯಾಸ್ ಕೊರತೆಯ ಕಾರಣದಿಂದ ಕೆಲವು ಹೋಟೆಲ್‌ಗಳು ತಮ್ಮ ಮೆನುಗಳನ್ನು ಸೀಮಿತಗೊಳಿಸಲು ಯೋಚಿಸುತ್ತಿವೆ.

ಇದಕ್ಕೆ ಜೊತೆಗೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹115ರಷ್ಟು ಏರಿಕೆ ಆಗಿರುವುದೂ ಹೋಟೆಲ್ ಉದ್ಯಮಕ್ಕೆ ಮತ್ತೊಂದು ಹೊರೆ ಆಗಿದೆ. ಗ್ಯಾಸ್ ಬೆಲೆ ಹೆಚ್ಚಳದ ಪರಿಣಾಮವಾಗಿ ಹೋಟೆಲ್ ಆಹಾರದ ದರಗಳು ಕೂಡ ಏರಿಕೆಯಾಗುವ ಸಾಧ್ಯತೆ ಇದೆ.

ಪಿಜಿ ಮತ್ತು ಮೆಸ್‌ಗಳಲ್ಲೂ ಬದಲಾವಣೆ

ಬೆಂಗಳೂರು ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಪಿಜಿ ಹಾಗೂ ಮೆಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಗ್ಯಾಸ್ ಕೊರತೆ ಮುಂದುವರಿದರೆ ಈ ಪಿಜಿಗಳಲ್ಲಿಯೂ ಮೆನು ಬದಲಾವಣೆ ಆಗುವ ಸಾಧ್ಯತೆ ಇದೆ. ದೋಸೆ, ಚಪಾತಿ, ಇಡ್ಲಿ ಸೇರಿದಂತೆ ಕೆಲವು ಆಹಾರ ಪದಾರ್ಥಗಳನ್ನು ಕಡಿಮೆ ಮಾಡುವ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Exit mobile version