ರಾಜ್ಯದಲ್ಲಿ ವರುಣನ ಆರ್ಭಟ: ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ

Untitled design 2025 08 09t173420.727

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ಮುಂದುವರೆಸಿದೆ. ಸಿಲಿಕಾನ್ ಸಿಟಿ ಬೆಂಗಳೂರು, ವಿಜಯಪುರ, ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಶಾಲೆಗಳು, ಮನೆಗಳು, ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. .

ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಲ್ಲೇಶ್ವರಂ, ರಾಜಾಜಿನಗರ, ಶಾಂತಿನಗರ, ಶೇಷಾದ್ರಿಪುರಂ, ಮತ್ತು ಯಶವಂತಪುರ ಹಲವೆಡೆ ವರುಣನ ಆರ್ಭಟ ಜೋರಾಗಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವೆಡೆ ರಸ್ತೆಗಳು ಹೊಳೆಯಂತಾಗಿವೆ, ಮತ್ತು ಮಳೆ ನೀರಿನಿಂದಾಗಿ ವ್ಯಾಪಾರಿಗಳಿಗೆ, ವಿಶೇಷವಾಗಿ ಹೂವು ಮತ್ತು ಹಣ್ಣಿನ ವ್ಯಾಪಾರಿಗಳಿಗೆ ತೀವ್ರ ನಷ್ಟವಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು ದಿನಗಳವರೆಗೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ವಿಜಯಪುರದಲ್ಲಿ ಮಳೆಯಿಂದ ಶಾಲೆಗಳಿಗೆ ಕಂಟಕ

ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ವಿಜಯಪುರದ ಸಿದ್ದಗಂಗಾ ಶಾಲೆಯ ಆವರಣದಲ್ಲಿ ಮಳೆ ನೀರು ತುಂಬಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಂದರೆಯಾಗಿದೆ. ಶಾಲೆಯ ಆವರಣದಲ್ಲಿ ನೀರು ನಿಂತಿರುವುದರಿಂದ ವಿದ್ಯಾರ್ಥಿಗಳು ನೀರಿನಲ್ಲೇ ನಿಂತು ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. “ದಯವಿಟ್ಟು ನೀರನ್ನು ಹೊರಗಡೆ ಹಾಕಿ, ನಮಗೆ ಕಲಿಯಲು ಅವಕಾಶ ಕೊಡಿ,” ಎಂದು ವಿದ್ಯಾರ್ಥಿಗಳ ಮನವಿ ಮಾಡಿದ್ದಾರೆ.

ಕಲಬುರಗಿಯಲ್ಲಿ ಮಳೆಯಿಂದ ಹಾನಿ

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನಲ್ಲಿ ಭಾರೀ ಮಳೆಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾಡಿ ಪಟ್ಟಣದಲ್ಲಿ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ದವಸಧಾನ್ಯಗಳು ಹಾಳಾಗಿದ್ದು, ಜನರು ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿಯುತ್ತಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

Exit mobile version