ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆ*ತ್ಮಹ*ತ್ಯೆ

ವಾಹನ (11)

ಬೆಂಗಳೂರು/ಶಿವಮೊಗ್ಗ: ಪಾಗಲ್‌ ಪ್ರೇಮಿಯ ನಿರಂತರ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದ ಮೂಲದ 22 ವರ್ಷದ ವಾಣಿಶ್ರೀ ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಣಿಶ್ರೀ ಬೆಂಗಳೂರಿನಲ್ಲಿ ಪಿಜಿಯೊಂದರಲ್ಲಿ ವಾಸವಾಗಿದ್ದು, ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆದರೆ ಕಾಲೇಜು ದಿನಗಳಲ್ಲಿ ಪರಿಚಯವಾಗಿದ್ದ ಅಭಿಷೇಕ್ ಎಂಬಾತನ ಕಿರುಕುಳದಿಂದಾಗಿ ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಕಿರುಕುಳದ ಉಲ್ಲೇಖ

ಆತ್ಮಹತ್ಯೆಗೂ ಮುನ್ನ ವಾಣಿಶ್ರೀ ಡೆತ್‌ನೋಟ್ ಬರೆದಿಟ್ಟಿದ್ದರು ಎನ್ನಲಾಗಿದೆ. ಅದರಲ್ಲಿ ತಮ್ಮ ಕ್ಲಾಸ್‌ಮೇಟ್ ಅಭಿಷೇಕ್‌ನಿಂದ ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಭಿಷೇಕ್ ವಾಟ್ಸ್‌ಆ್ಯಪ್ ಮೂಲಕ ವಿಡಿಯೋಗಳು ಮತ್ತು ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಯುವತಿ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಾನು ಕರೆದಾಗಲೆಲ್ಲ ರೂಮಿಗೆ ಬರಬೇಕು ಎಂದು ಸಂದೇಶ ಕಳುಹಿಸುತ್ತಿದ್ದನೆಂಬ ಆರೋಪವೂ ಇದೆ.

ಈ ಕಿರುಕುಳದಿಂದಾಗಿ ತಾನು ಮಾನಸಿಕವಾಗಿ ನೊಂದಿರುವುದಾಗಿ ವಾಣಿಶ್ರೀ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ತಮ್ಮ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ಉಲ್ಲೇಖಿಸಿದ್ದಾಳೆ.

ಅಭಿಷೇಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಆತನಿಗೆ ಶಿಕ್ಷೆಯಾಗಬೇಕು ಎಂಬ ಮನವಿಯನ್ನೂ ಯುವತಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಬೆಳಗ್ಗೆಯಿಂದ ನಾಪತ್ತೆ

ಘಟನೆ ನಡೆದ ದಿನ ಬೆಳಗ್ಗೆ ವಾಣಿಶ್ರೀ ಪಿಜಿಯಿಂದ ಹೊರಗೆ ಹೋಗಿದ್ದರು ಎನ್ನಲಾಗಿದೆ. ಅವರು ವಾಪಸ್ ಬಾರದ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಈ ಸಂಬಂಧ ಅವರ ಅಕ್ಕ ಪೂಜಾ ಅವರು ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಯುವತಿಗಾಗಿ ಹುಡುಕಾಟ ಆರಂಭಿಸಿದ್ದರು. ಇದೇ ವೇಳೆ ಸಂಜೆ ಅಗರ ಕೆರೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕುಟುಂಬಸ್ಥರಿಂದ ಗಂಭೀರ ಆರೋಪ

ವಾಣಿಶ್ರೀ ಆತ್ಮಹತ್ಯೆಗೆ ಅಭಿಷೇಕ್‌ನ ಕಿರುಕುಳವೇ ಕಾರಣ ಎಂದು ಅವರ ಅಕ್ಕ ಪೂಜಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಕಾಲೇಜು ದಿನಗಳಿಂದಲೂ ವಾಣಿಶ್ರೀ ಮತ್ತು ಅಭಿಷೇಕ್ ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದೆ.

ವಾಣಿಶ್ರೀ ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿದ್ದ ವಿಚಾರ ತಿಳಿದಿದ್ದ ಅಭಿಷೇಕ್ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ಸಂದೇಶ, ಫೋಟೋ ಮತ್ತು ವಿಡಿಯೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದ ಆರೋಪವೂ ಕೇಳಿಬಂದಿದೆ.

ಆರೋಪಿಯ ಪತ್ತೆಗೆ ಪೊಲೀಸರ ಶೋಧ

ಈ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಅಕ್ಕ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಯಾಗಿರುವ ಅಭಿಷೇಕ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Exit mobile version