ಬೆಂಗಳೂರು: ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಜನಪ್ರಿಯ ಬ್ರ್ಯಾಂಡ್‌ಗಳ ಮೊಟ್ಟೆಗಳಲ್ಲಿ ‘AOZ-ನೈಟ್ರೋಫ್ಯುರಾನ್’ ಎಂಬ ಅತ್ಯಂತ ಅಪಾಯಕಾರಿ ಮತ್ತು ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂಬ ಚರ್ಚೆಗಳು ತೀವ್ರಗೊಂಡಿವೆ. ಈ ಸುದ್ದಿಯ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಸತ್ಯಾಂಶವನ್ನು ಪತ್ತೆಹಚ್ಚಲು ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲು ಸೂಚನೆ ನೀಡಿದೆ.
ಈ ರಾಸಾಯನಿಕವು ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಕ್ರಮೇಣ ಕುಂದಿಸುತ್ತದೆ ಎಂದು ತಿಳಿದುಬಂದಿದೆ. ದುರ್ಬಲಗೊಂಡ ರೋಗನಿರೋಧಕ ಶಕ್ತಿಯಿಂದಾಗಿ ವ್ಯಕ್ತಿಯು ಸಾಮಾನ್ಯ ಸೋಂಕುಗಳಿಂದ ಹಿಡಿದು ಗಂಭೀರ ಕಾಯಿಲೆಗಳವರೆಗೂ ಸುಲಭವಾಗಿ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರತಿದಿನ ಮೊಟ್ಟೆ ಸೇವಿಸುವ ಲಕ್ಷಾಂತರ ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಮೊಟ್ಟೆ ಉತ್ಪಾದನೆಯಲ್ಲಿ ಕೋಳಿಗಳಿಗೆ ನೀಡಲಾಗುವ ನಿರ್ದಿಷ್ಟ ಮಾದರಿಯ ಆಂಟಿಬಯೋಟಿಕ್ ಈ ಅಂಶದ ರಚನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಈ ಆತಂಕಕಾರಿ ಮಾಹಿತಿ ಹರಡುತ್ತಿದ್ದಂತೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಈ ಹಿಂದೆ ಕೂಡ ಈ ಬಗ್ಗೆ ವರದಿಗಳು ಬಂದಿದ್ದವು ಮತ್ತು ಸಚಿವರ ಸೂಚನೆಯ ಮೇರೆಗೆ ಮೊಟ್ಟೆಗಳ ಪರೀಕ್ಷೆ ನಡೆಸಲಾಗಿತ್ತು. ಆದರೆ, ಹಿಂದಿನ ವರದಿಯಲ್ಲಿ ಯಾವುದೇ ಅಪಾಯಕಾರಿ ಅಂಶ ಪತ್ತೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.
ಆದರೆ, ಇತ್ತೀಚೆಗೆ ವಿಷಕಾರಿ ಅಂಶ ಪತ್ತೆ ಕುರಿತ ಚರ್ಚೆ ಮತ್ತು ಆತಂಕ ಹೆಚ್ಚುತ್ತಿರುವುದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಹೊಸದಾಗಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ಎಲ್ಲಾ ರೀತಿಯ ಮೊಟ್ಟೆಗಳ ಮಾದರಿಗಳನ್ನು ತಕ್ಷಣವೇ ಸಂಗ್ರಹಿಸಬೇಕು. ಅವುಗಳನ್ನು ವಿಶ್ವಾಸಾರ್ಹ ಪ್ರಯೋಗಾಲಯಗಳಿಗೆ ಕಳುಹಿಸಿ, ಅವುಗಳಲ್ಲಿ AOZ-ನೈಟ್ರೋಫ್ಯುರಾನ್ ಅಥವಾ ಯಾವುದೇ ಇತರ ವಿಷಕಾರಿ ಅಂಶಗಳ ಇರುವಿಕೆಯ ಬಗ್ಗೆ ಕೂಲಂಕುಷವಾಗಿ ಪರೀಕ್ಷೆ ನಡೆಸಿ, ತಕ್ಷಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವರು ಈ ವಿಷಯದ ಗಂಭೀರತೆಯನ್ನು ಒತ್ತಿ ಹೇಳಿದ್ದು, ಇದು ರಾಜ್ಯದ ಜನರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯಾದ್ಯಂತ ಮೊಟ್ಟೆಗಳ ಮಾದರಿ ಸಂಗ್ರಹ ಕಾರ್ಯಾಚರಣೆ ನಡೆಯಲಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಯಾವುದೇ ಜನಪ್ರಿಯ ಅಥವಾ ಸ್ಥಳೀಯ ಬ್ರ್ಯಾಂಡ್‌ಗಳ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ನಿಜವಾಗಿಯೂ ಪತ್ತೆಯಾದಲ್ಲಿ ಅಂತಹ ಮೊಟ್ಟೆ ಉತ್ಪಾದಕರ ವಿರುದ್ಧ ಸರ್ಕಾರವು ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
