ಬೆಂಗಳೂರು: ಬೆಂಗಳೂರಿನ ನೆಲಮಂಗಲದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌ಗೆ ಬಿಎಂಟಿಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನೆಲಮಂಗಲ ಟೌನ್ ವೀವರ್ಸ್ ಕಾಲೋನಿ ಬಳಿ ನಡೆದಿದೆ.
ಮೃತರನ್ನು 25 ವರ್ಷದ ಮನುಗೌಡ ಎಂದು ಗುರುತಿಸಲಾಗಿದೆ. ಇವರು ತುಮಕೂರು ಜಿಲ್ಲೆಯ ಸಿರಾ ಮೂಲದವರು ಎಂದು ತಿಳಿದುಬಂದಿದೆ. ನೆಲಮಂಗಲದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮನುಗೌಡ, ಪತ್ನಿ ಮಮತಾ ಅವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಹಿಂದಿನಿಂದ ಬಂದ BMTC ಬಸ್ ಡಿಕ್ಕಿ
ಮಾಹಿತಿ ಪ್ರಕಾರ, ಮನುಗೌಡ ತಮ್ಮ ಪತ್ನಿಯೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ದಂಪತಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮನುಗೌಡ ಅವರ ಮೇಲೆ ಬಸ್ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಘಾತದ ವೇಳೆ ಮನುಗೌಡ ಅವರ ಪತ್ನಿ ಮಮತಾ ಅದೃಷ್ಟವಶಾತ್ ರಸ್ತೆಯ ಎಡಭಾಗಕ್ಕೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ತಮ್ಮ ಕಣ್ಣೆದುರೇ ಪತಿ ಮೃತಪಟ್ಟಿದ್ದಾರೆ.
ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆ
ಮನುಗೌಡ ಮತ್ತು ಮಮತಾ ಸುಮಾರು ಎಂಟು ತಿಂಗಳ ಹಿಂದಷ್ಟೇ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ. ಮನುಗೌಡ ಅವರು ಸಿರಾ ಮೂಲದವರಾಗಿದ್ದು, ಮಮತಾ ಅವರು ನೆಲಮಂಗಲದ ಸೋಲೂರು ಮೂಲದವರು ಎಂದು ತಿಳಿದುಬಂದಿದೆ. ದಂಪತಿ ಬೆಂಗಳೂರು ಉತ್ತರ ತಾಲೂಕಿನ ಹುಲೆಗೌಡನಹಳ್ಳಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಜಾತಿ ಪ್ರಮಾಣಪತ್ರ ಪಡೆಯಲು ತೆರಳಿದ್ದ ದಂಪತಿ
ಘಟನೆಗೂ ಮುನ್ನ ಮನುಗೌಡ ಹಾಗೂ ಮಮತಾ ನೆಲಮಂಗಲ ತಾಲೂಕು ಕಚೇರಿಗೆ ತೆರಳಿದ್ದರು ಎನ್ನಲಾಗಿದೆ. ಪತ್ನಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವ ಸಲುವಾಗಿ ತಾಲೂಕು ಕಚೇರಿಗೆ ಬಂದಿದ್ದ ದಂಪತಿ, ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
