ಬ್ಯಾಂಕ್‌ ಲಾಕರ್‌ನಿಂದ ₹4 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಲೂಟಿ: ಅಸಿಸ್ಟೆಂಟ್ ಮ್ಯಾನೇಜರ್ ಬಂಧನ

ಬೆಂಗಳೂರು, ಫೆಬ್ರವರಿ 14: ಆನ್ಲೈನ್ ಜೂಜಾಟದ ಚಟಕ್ಕೆ ಬಿದ್ದ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್‌ರೊಬ್ಬ ತಾನು ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನೇ ಗುಳುಂ ಮಾಡಿದ್ದಾನೆ. ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್‌ನಲ್ಲಿ ನಡೆದಿರುವ ಈ ಶಾಕಿಂಗ್ ಘಟನೆ ಈಗ ಬೆಳಕಿಗೆ ಬಂದಿದ್ದು, ಆರೋಪಿ ಕಿರಣ್ ಎಂಬ ಅಸಿಸ್ಟೆಂಟ್ ಮ್ಯಾನೇಜರ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಕಳೆದ ಹಲವು ತಿಂಗಳುಗಳಿಂದ ಈ ಕೃತ್ಯ ಎಸಗುತ್ತಾ ಬಂದಿದ್ದಾನೆ. ಸಾರ್ವಜನಿಕರು ತುರ್ತು ಹಣಕಾಸು ಅಗತ್ಯಗಳಿಗಾಗಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣಗಳನ್ನು ಆತ ಯಾರಿಗೂ ಅನುಮಾನ ಬಾರದಂತೆ ಲಾಕರ್‌ನಿಂದ ತೆಗೆದು ದುರುಪಯೋಗ ಮಾಡಿಕೊಂಡಿದ್ದಾನೆ. ಅಧಿಕಾರದ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ದಾಖಲೆಗಳಲ್ಲಿ ಯಾವುದೇ ತಕ್ಷಣದ ವ್ಯತ್ಯಾಸ ಕಾಣಿಸದಂತೆ ನೋಡಿಕೊಂಡಿದ್ದಾನೆ.. ಒಟ್ಟು 4,12,65,000 ರೂಪಾಯಿ ಮೌಲ್ಯದ ಚಿನ್ನವನ್ನು ಕಿರಣ್ ಕಳವು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಳ್ಳತನಕ್ಕೆ ಕಾರಣವೇನು?

ಆರೋಪಿ ಕಿರಣ್‌ಗೆ ಆನ್ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ದಂಧೆಯ ಚಟವಿತ್ತು. ಇದಕ್ಕಾಗಿ ಹಣ ಹೊಂದಿಸಲು ಬ್ಯಾಂಕ್‌ನ ಚಿನ್ನವನ್ನೇ ಬಳಸಿಕೊಂಡಿದ್ದಾನೆ. ದುಬಾರಿ ಜೂಜಾಟದ ಚಟಕ್ಕೆ ಬಿದ್ದು ತನ್ನ ಹುದ್ದೆಯ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಕ್ಕಿಬಿದ್ದದ್ದು ಹೇಗೆ?

ಬ್ಯಾಂಕ್ ಮ್ಯಾನೇಜರ್ ಅವರು ಲಾಕರ್‌ನಲ್ಲಿರುವ ಚಿನ್ನಾಭರಣಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವಾಗ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆರಂಭದಲ್ಲಿ ಅನುಮಾನ ವ್ಯಕ್ತವಾದ ಕೂಡಲೇ ಬ್ಯಾಂಕ್ ವತಿಯಿಂದ ಆಂತರಿಕ ತನಿಖೆ ಆರಂಭಿಸಲಾಯಿತು. ಈ ವೇಳೆ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಮೇಲೆ ಶಂಕೆ ವ್ಯಕ್ತವಾಯಿತು. ಬಳಿಕ ಪೊಲೀಸ್ ವಿಚಾರಣೆ ನಡೆಸಿದಾಗ ಕಿರಣ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Exit mobile version