ಬೆಂಗಳೂರು, ಏಪ್ರಿಲ್ 8: ಬೆಂಗಳೂರು ನಗರದ ನಾಯಂಡಳ್ಳಿ (Nayandahalli) ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಮೂರನೇ ಮಹಡಿಯ ಕಿಟಕಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಮಗುವಿನ ಸ್ಥಿತಿ ಕಂಡು ತಾಯಿ ರಸ್ತೆಯಲ್ಲೇ ಮೂರ್ಛೆ ಹೋಗಿದ್ದಾರೆ.
ಏಪ್ರಿಲ್ 6ರಂದು ನಡೆದ ದುರ್ಘಟನೆ
ಏಪ್ರಿಲ್ 6ರಂದು ಸಂಜೆ ಸುಮಾರು 4:30 ಗಂಟೆಗೆ ನಾಯಂಡಳ್ಳಿಯ ಬಹುಮಹಡಿ ವಸತಿಯಲ್ಲಿ ಈ ಘಟನೆ ಸಂಭವಿಸಿದೆ. ಒಂದೂವರೆ ವರ್ಷದ ಹೆಣ್ಣು ಮಗು ತನ್ನ ಮನೆಯ ಮೂರನೇ ಮಹಡಿಯ ಕೋಣೆಯಲ್ಲಿ ಆಟವಾಡುತ್ತಿತ್ತು. ಕಿಟಕಿಯ ಬಳಿ ಇದ್ದ ಮಗು ಆಯತಪ್ಪಿ ಕೆಳಗೆ ಬಿದ್ದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಕ್ಷಣ
ಮಗು ಬಿದ್ದ ಎದೆ ಝಲ್ ಎನ್ನುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಮಗು ಕಿಟಕಿಯಿಂದ ಹೊರಗೆ ನೋಡುತ್ತಿರುವುದು, ನಂತರ ಹಠಾತ್ತನೆ ಕೆಳಗೆ ಬೀಳುವುದು ಕಂಡುಬಂದಿದೆ. ಕೆಳಗೆ ಬಿದ್ದ ತಕ್ಷಣ ಮಗುವಿನ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ.
ತಾಯಿ ರಸ್ತೆಯಲ್ಲೇ ಮೂರ್ಛೆ
ಮಗು ಬಿದ್ದ ವಿಚಾರ ತಿಳಿದು ತಾಯಿ ಕೂಗಿಕೊಂಡು ಕೆಳಗೆ ಓಡಿಬಂದಿದ್ದಾರೆ. ತಮ್ಮ ಮಗುವನ್ನು ನೋಡಿದ ತಾಯಿಗೆ ಆಘಾತವಾಗಿದೆ. ಅವರು ರಸ್ತೆ ಮಧ್ಯದಲ್ಲೇ ಕುಸಿದು ಬಿದ್ದು ಮೂರ್ಛೆ ಹೋದರು. ನೆರೆಯವರು ತಕ್ಷಣ ತಾಯಿ ಮತ್ತು ಮಗು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ತಾಯಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರು ಈಗ ಆರೋಗ್ಯವಾಗಿದ್ದಾರೆ.
ಮಗುವಿನ ಸ್ಥಿತಿ ಗಂಭೀರ-ಐಸಿಯುನಲ್ಲಿ ಚಿಕಿತ್ಸೆ
ಗಂಭೀರವಾಗಿ ಗಾಯಗೊಂಡ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರ ಪೆಟ್ಟಾಗಿರುವುದರಿಂದ, ಒಳ ರಕ್ತಸ್ರಾವದ ಆತಂಕವಿದೆ. ಸದ್ಯ ಮಗು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದೆ.
