ಕೆಂಪೇಗೌಡ ಏರ್ಪೋರ್ಟ್‌‌ನಲ್ಲಿ ಅಪಘಾತ: ನಿಂತಿದ್ದ ವಿಮಾನಕ್ಕೆ ಗುದ್ದಿದ ಟಿಟಿ ವಾಹನ

Untitled design 2025 04 20t092644.751

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅಪಘಾತ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಸಂಭವಿಸಿದ ಈ ಘಟನೆಯಲ್ಲಿ ಇಂಡಿಗೋ ವಿಮಾನಕ್ಕೆ ಟೆಂಪೋ ಟ್ರಾವೆಲರ್‌ ಒಂದು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಈ ಘಟನೆ ಏಪ್ರಿಲ್ 19 ರಂದು ಮಧ್ಯಾಹ್ನ 12.15ರ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಡ್ರೈವರ್ ನಿದ್ರೆಯ ಮಂಪರಿನಲ್ಲಿದ್ದ ಕಾರಣ, ತನ್ನ ನಿಯಂತ್ರಣ ತಪ್ಪಿ, ನಿಂತಿದ್ದ ಇಂಡಿಗೋ ಏರ್‌ಲೈನ್ಸ್‌ನ A320  ವಿಮಾನದ ಕೆಳಭಾಗಕ್ಕೆ ಗುದ್ದಿದೆ. ಡಿಕ್ಕಿ ಹೊಡೆದ ತಕ್ಷಣ ಚಾಲಕ ಎಚ್ಚೆತ್ತುಕೊಂಡಿದ್ದು, ತಕ್ಷಣವೇ ವಾಹನವನ್ನು ನಿಲ್ಲಿಸಿದ್ದಾನೆ.

ಟೆಂಪೋ ಟ್ರಾವೆಲರ್‌ಗಳನ್ನು ಸಾಮಾನ್ಯವಾಗಿ ಏರ್‌ಪೋರ್ಟ್ ಸಿಬ್ಬಂದಿಯನ್ನು ಅವರ ಕಚೇರಿ ಮತ್ತು ವಿಮಾನಗಳ ಬಳಿ ಇರುವ ಸೇವಾ ಪ್ರದೇಶಗಳಿಗೆ ಡ್ರಾಪ್ ಹಾಗೂ ಪಿಕ್‌ಅಪ್ ಮಾಡಲು ಬಳಸಲಾಗುತ್ತದೆ. ಘಟನೆಯಲ್ಲಿ ಯಾವುದೇ ಸಿಬ್ಬಂದಿ ಅಥವಾ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಹಾನಿಯಾಗಿಲ್ಲ. ವಿಮಾನಕ್ಕೆ ಸ್ವಲ್ಪ ಪ್ರಮಾಣದ ತಾಂತ್ರಿಕ ಹಾನಿ ಸಂಭವಿಸಿರುವ ವರದಿಯಾಗಿದೆ. ಈ ಕುರಿತು ತಕ್ಷಣವೇ ವಿಮಾನಯಾನ ಕಂಪನಿ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಕಾರಣವಾಗಿರುವ ಚಾಲಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ಪ್ರಾಥಮಿಕ ವಿಚಾರಣೆಯ ಪ್ರಕಾರ, ಅವನು ನಿರಂತರವಾಗಿ ಡ್ಯೂಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಕ್ಲಾಂತಿಯು ಮೂಡಿತ್ತು ಎನ್ನಲಾಗಿದೆ. ಇದರಿಂದಾಗಿ ನಿದ್ರೆಯ ಮಂಪರಿನಲ್ಲಿ ವಾಹನವನ್ನು ನಿಯಂತ್ರಿಸಲು ವಿಫಲವಾದ ಎಂಬ ಶಂಕೆ ವ್ಯಕ್ತವಾಗಿದೆ.

Exit mobile version