ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದ್ದ ಭಾರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ತಮಿಳುನಾಡಿನ ವೇಲೂರು ಬಳಿ ಮತ್ತೊಬ್ಬ ಮುಖ್ಯ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲಾಗಿದೆ.
ಈ ಆರೋಪಿಯನ್ನು ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ನಿವಾಸಿಯೆಂದು ಗುರುತಿಸಲಾಗಿದೆ. ದರೋಡೆಯಿಂದ ಬಂದ 7.11 ಕೋಟಿ ರೂ.ಗಳಲ್ಲಿ ತನ್ನ ಪಾಲು ಹಣವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ದರೋಡೆ ಬಳಿಕ ಇನ್ನೋವಾ ಕಾರಿನಲ್ಲಿ ಪ್ರಯಾಣಿಸಿ, ಕಾರನ್ನು ಕುಪ್ಪಂ ಬಳಿ ಬಿಟ್ಟು, ಅಲ್ಲಿ ಇಂದೇ ವ್ಯಾಗನ್‌ಆರ್ ಮೂಲಕ ಮುಂದಿನ ಪ್ರಯಾಣ ಮುಂದುವರಿಸಿದ್ದಾನೆ. ಹಣ ಹಂಚಿಕೊಳ್ಳುವ ಸಂದರ್ಭದಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಈ ಆರೋಪಿ ಸಿಕ್ಕಿಬಿದ್ದಿದ್ದಾನೆ.
ದುಷ್ಕರ್ಮಿಗಳು ದರೋಡೆ ಬಳಿಕ 10-10 ಲಕ್ಷ ರೂಪಾಯಿ ಮೊತ್ತವನ್ನು ಖರ್ಚಿಗಾಗಿ ಗ್ಯಾಂಗ್ ಸದಸ್ಯರಿಗೆ ಹಂಚಿಕೊಂಡಿದ್ದರು. ಉಳಿದ ಹಣವನ್ನು ಒಟ್ಟಿಗೆ ಇಟ್ಟುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸುಳಿವು ಸಿಕ್ಕಿದೆ. ಇದೀಗ ಬಂಧಿತ ಆರೋಪಿಯ ಬಳಿ ಇದ್ದ ಮೊತ್ತವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಕರೆತಂದು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆ ನಡೆದ ದಿನದಿಂದಲೇ ಪ್ರಕರಣ ತನಿಖೆಗೆ ಐಜಿಪಿ ಹಾಗೂ ಡಿಸಿಪಿ ಮಟ್ಟದ ಅಧಿಕಾರಿಗಳು ವಿಶೇಷ ತಂಡಗಳನ್ನು ರಚಿಸಿದ್ದರು. ಇದುವರೆಗೂ ಐದಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವು ಪ್ರಮುಖ ಸದಸ್ಯರು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಭಾಗಗಳಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
7.11 ಕೋಟಿ ದರೋಡೆ ಪ್ರಕರಣ: ಇನ್ನೋವಾ ಕಾರು ಕೊಟ್ಟಿದ್ದ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಆಘಾತಕಾರಿ ಮಾಹಿತಿ ದೊರೆತ್ತಿದೆ. ಇಂದು ತನಿಖೆಯಲ್ಲಿ ಹೊಸ ಬೆಳಬಣಿಗೆ ಕಂಡುಬಂದಿದೆ. ದರೋಡೆಕೋರರಿಗೆ ಇನ್ನೋವಾ ಕ್ರಿಸ್ಟಾ ಕಾರು ಒದಗಿಸಿದ್ದ ಗೋವಿಂದಪುರದ ಇಬ್ಬರು ಯುವಕರು ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಇನ್ನೊಂದೆಡೆ ಗೋವಿಂದಪುರ ಪೊಲೀಸ್ ಠಾಣೆಯ ಸಿಬ್ಬಂದಿ ಅಣ್ಣಪ್ಪ ನಾಯಕ್ ಎಂಬ ಪಿಸಿ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ. ಅವರನ್ನೂ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ದರೋಡೆ ನಡೆದ ದಿನ ಆರೋಪಿಗಳು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಆಗಮಿಸಿ, 7.11 ಕೋಟಿ ರೂಪಾಯಿ ನಗದು ಮತ್ತು ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದರು. ಕೃತ್ಯ ಮುಗಿಸಿದ ಬಳಿಕ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಾಲ ರಸ್ತೆ ಬದಿಯಲ್ಲಿ ಕಾರನ್ನು ಬಿಟ್ಟು ಪರಾಯಾಗಿದ್ದರು. ಪೊಲೀಸರು ಆ ಕಾರನ್ನು ವಶಪಡಿಸಿಕೊಂಡು ಎಂಜಿನ್ ಮತ್ತು ಚಾಸಿಸ್ ನಂಬರ್ ಆಧರಿಸಿ ತನಿಖೆ ಆರಂಭಿಸಿದ್ದರು.
ತಾಂತ್ರಿಕ ತನಿಖೆಯಲ್ಲಿ ಮೊದಲು ಕಾರಿನ ಮೂಲ ಮಾಲೀಕನನ್ನು ಪತ್ತೆಹಚ್ಚಲಾಯಿತು. ಅವರ ವಿಚಾರಣೆಯಲ್ಲಿ ಕಾರನ್ನು ಈಗಾಗಲೇ ಮಾರಾಟ ಮಾಡಿರುವುದು ತಿಳಿದುಬಂದಿದೆ. ಆ ಮಾರಾಟದ ದಾರಿ ಹಿಡಿದು ಗೋವಿಂದಪುರದ ಇಬ್ಬರು ಯುವಕರ ಬಳಿ ಪೊಲೀಸರು ತಲುಪಿದರು. ಈ ಇಬ್ಬರು ದರೋಡೆಕೋರರಿಗೆ ತಾವೇ ಗೊತ್ತಿರುವವರಿಗೆ ಉದ್ದೇಶಪೂರ್ವಕವಾಗಿ ಕಾರು ನೀಡಿದ್ದಾರೆ ಎಂಬ ಆರೋಪವಿದೆ. ದರೋಡೆಯ ಯೋಜನೆಯ ಬಗ್ಗೆ ಇವರಿಗೆ ಮುಂಚಿತವಾಗಿ ಮಾಹಿತಿ ಇತ್ತೇ ..? ಎಂಬುದನ್ನು ಪೊಲೀಸರು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.
ಮತ್ತೊಂದೆಡೆ ಗೋವಿಂದಪುರ ಪೊಲೀಸ್ ಠಾಣೆಯ ಪಿಸಿ ಅಣ್ಣಪ್ಪ ನಾಯಕ್ ಮೇಲೆ ಬಂದಿರುವ ಶಂಕೆ. ದರೋಡೆಕೋರರ ಜೊತೆ ಅಣ್ಣಪ್ಪ ನಾಯಕ್‌ನಿಗೆ ನೇರ ಸಂಪರ್ಕವಿತ್ತು, ಪೊಲೀಸ್ ಚಟುವಟಿಕೆಯ ಮಾಹಿತಿ ರವಾನಿಸುತ್ತಿದ್ದ ಎಂಬ ಆರೋಪಗಳಿವೆ. ಆರೋಪಿಗಳಿಗೆ ದರೋಡೆ ತಂತ್ರಗಳ ಬಗ್ಗೆ ತರಬೇತಿ ನೀಡಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ತಂಡವೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಅಣ್ಣಪ್ಪ ನಾಯಕ್ ಮೊಬೈಲ್ ಫೋನ್, ಕಾಲ್ ರೆಕಾರ್ಡ್‌ಗಳು, ವಾಟ್ಸಾಪ್ ಚಾಟ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಬಾಕಿ ಇದ್ದಾರೆ. ಮಾಸ್ಟರ್‌ಮೈಂಡ್ ಯಾರು, ಲೂಟಿಯಾದ ಹಣ ಎಲ್ಲಿಗೆ ಹೋಯಿತು ಎಂಬುದು ಇನ್ನೂ ಬಯಲಾಗಬೇಕಿದೆ. ಆದರೆ ಇನ್ನೋವಾ ಕಾರು ಒದಗಿಸಿದ ಇಬ್ಬರು ಯುವಕರು ಮತ್ತು ಪಿಸಿ ಅಣ್ಣಪ್ಪ ನಾಯಕ್ ಅವರ ವಿಚಾರಣೆಯಿಂದ ಮಹತ್ವದ ಮಾಹಿತಿ ದೊರೆಯುವ ನಿರೀಕ್ಷೆಯಿದೆ.
