ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ಅವರ ಬಳ್ಳಾರಿಯ ಮಾಡೆಲ್ ಹೌಸ್‌ಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ನೂರು ಎಕರೆ ವಿಸ್ತೀರ್ಣದ ಜಿ ಎಸ್‌ಎಂಆರ್ ಲೇಔಟ್‌ನಲ್ಲಿ ನಿರ್ಮಿಸಲಾದ ವಸತಿ ಮನೆಯೇ ಬೆಂಕಿಗೆ ಆಹುತಿಯಾಗಿದ್ದು, ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಆದರೆ, ಆ ಹೊತ್ತಿಗೆ ಮಾಡೆಲ್ ಹೌಸ್ ಬಹುತೇಕ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಲೇಔಟ್‌ನಲ್ಲಿ ನಿರ್ಮಿಸಲಾಗಿರುವ ಮನೆಗಳ ಮಾದರಿಯಾಗಿ ಗ್ರಾಹಕರಿಗೆ ತೋರಿಸುವ ಉದ್ದೇಶದಿಂದ ಈ ಮಾಡೆಲ್ ಹೌಸ್ ನಿರ್ಮಿಸಲಾಗಿತ್ತು. ಇಂತಹ ಮಹತ್ವದ ಕಟ್ಟಡವನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದು ರಾಜಕೀಯ ದುರುದ್ದೇಶದ ಶಂಕೆಗೆ ಕಾರಣವಾಗಿದೆ.
ಬ್ಯಾನರ್ ಗಲಾಟೆಯ ಬೆನ್ನಲ್ಲೇ ದಾಳಿ
ಇತ್ತೀಚೆಗೆ ಜನವರಿ 1ರಂದು ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ನಿಮಿತ್ತ ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಸುವ ವೇಳೆ ರಾಜಕೀಯ ಘರ್ಷಣೆ ಉಂಟಾಗಿತ್ತು. ಈ ವೇಳೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಕಲ್ಲು ತೂರಾಟ ನಡೆದಿತ್ತು.
ಆ ಘಟನೆಯಲ್ಲಿ ನಾರಾ ಭರತ್ ರೆಡ್ಡಿ ಆಪ್ತನ ಖಾಸಗಿ ಗನ್ ಮ್ಯಾನ್ ಹಾರಿಸಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದರಿಂದ, ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಜನಾರ್ದನ ರೆಡ್ಡಿ ಅವರ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಘಟನೆ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ.
