ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆ ಕೊನೆಗೆ ಫೈರಿಂಗ್‌ಗೆ ತಿರುಗಿ, ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಸಾವನ್ನಪ್ಪಿರುವ ಬಳ್ಳಾರಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ರಾಜಕೀಯ ನಾಯಕ ಸತೀಶ್ ರೆಡ್ಡಿಗೆ ಸೇರಿದ ಮೂವರು ಗನ್‌ಮ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಂಜಾಬ್ ಮೂಲದ ಮಹೇಂದ್ರ ಸಿಂಗ್, ಬಲಜಿತ್ ಸಿಂಗ್ ಹಾಗೂ ಗುರುಚರಣ್ ಸಿಂಗ್ ಎಂಬ ಮೂವರು ಗನ್‌ಮ್ಯಾನ್‌ಗಳನ್ನು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಜನವರಿ 1ರಂದು ಬಳ್ಳಾರಿಯ ಜನಾರ್ದನ ರೆಡ್ಡಿ ನಿವಾಸದ ಬಳಿ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ನಡೆದ ಫೈರಿಂಗ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗಂಭೀರವಾಗಿ ಗಾಯಗೊಂಡು ನಂತರ ಮೃತಪಟ್ಟಿದ್ದಾನೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ಆರಂಭಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್ ವೀಡಿಯೋಗಳ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈಗಾಗಲೇ 10ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣದ ಬಳಿಕ ಸತೀಶ್ ರೆಡ್ಡಿಗೆ ಸೇರಿದ ಗನ್‌ಮ್ಯಾನ್‌ಗಳು ನಾಪತ್ತೆಯಾಗಿದ್ದರು. ಇದರಿಂದ ಪ್ರಕರಣ ಇನ್ನಷ್ಟು ಅನುಮಾನಾಸ್ಪದವಾಗಿತ್ತು. ಆದರೆ ಇದೀಗ ಮೂವರು ಗನ್‌ಮ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು ತನಿಖೆಗೆ ಮಹತ್ವದ ತಿರುವು ನೀಡಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಬ್ಯಾನರ್ ವಿಚಾರವೇ ಗಲಾಟೆಗೆ ಮೂಲ ಕಾರಣವಾಗಿದ್ದು, ಪರಿಸ್ಥಿತಿ ಕೈಮೀರಿದಾಗ ಗನ್ ಬಳಸಲಾಗಿದೆ ಎನ್ನಲಾಗಿದೆ. ಆದರೆ ಫೈರಿಂಗ್ ಆದೇಶ ಯಾರು ನೀಡಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗನ್‌ಮ್ಯಾನ್‌ಗಳ ಹೇಳಿಕೆಗಳು ಪ್ರಕರಣದ ದಿಕ್ಕು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
