ಬಾಗಲಕೋಟೆ ಶಾಲೆಯಲ್ಲಿ ಮೇಲ್ಛಾವಣಿ ಕುಸಿತ: ಮುಖ್ಯಶಿಕ್ಷಕ ಸೇರಿ ಇಬ್ಬರು ಇಂಜಿನಿಯರ್‌ಗಳು ಅಮಾನತು

Untitled design 2026 09 04T154905.486

ಬಾಗಲಕೋಟೆ: ತರಗತಿಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದ ವೇಳೆಯಲ್ಲೇ ಶಾಲಾ ಕೊಠಡಿಯ ಮೇಲ್ಛಾವಣಿಯ ಕಾಂಕ್ರೀಟ್‌ ಭಾಗ ಕುಸಿದು ಬಿದ್ದು ಮಕ್ಕಳು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಕರ್ತವ್ಯ ಲೋಪ ಹಾಗೂ ಶಾಲಾ ಕಟ್ಟಡದ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಹಾಗೂ ಇಬ್ಬರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್‌ 2ರಂದು ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕೊಠಡಿಯ ಮೇಲ್ಛಾವಣಿಯ ಪ್ಲಾಸ್ಟರಿಂಗ್ ಹಾಗೂ ಕಾಂಕ್ರೀಟ್‌ ಚೂರುಗಳು ಕೆಳಗೆ ಬಿದ್ದಿವೆ. ಘಟನೆಯಿಂದ ಕೆಲ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮೇಲ್ಛಾವಣಿಯ ಭಾಗ ಕುಸಿದ ಪರಿಣಾಮ ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. 

ಘಟನೆಯ ಬಳಿಕ ಶಾಲಾ ಕಟ್ಟಡದ ದುಸ್ಥಿತಿ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪೋಷಕರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಟ್ಟಡದ ಕೆಲವು ಭಾಗಗಳು ದುರಸ್ತಿ ಅಗತ್ಯವಿರುವ ಸ್ಥಿತಿಯಲ್ಲಿದ್ದರೂ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕ ಸಿ.ಬಿ. ಹೆಳವರ ವಿರುದ್ಧ ಕರ್ತವ್ಯ ಲೋಪದ ಆರೋಪದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಕೊಠಡಿಯ ಮೇಲ್ಛಾವಣಿ ದುರಸ್ತಿ ಹಂತದಲ್ಲಿದ್ದರೂ, ಅದರ ಸ್ಥಿತಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಇಲಾಖೆಯ ಗಮನಕ್ಕೆ ತರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕರ್ನಾಟಕ ನಾಗರಿಕ ಸೇವೆ (ಸಿಸಿಎ) ನಿಯಮಗಳು, 1957ರ ನಿಯಮ 10(1)ರ ಅನ್ವಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಆರ್.ಎಸ್. ಸೀತಾರಾಮು ಅವರು ಪ್ರಭಾರಿ ಮುಖ್ಯಶಿಕ್ಷಕ ಸಿ.ಬಿ. ಹೆಳವರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದೇ ವೇಳೆ ಶಾಲಾ ಕಟ್ಟಡದ ಸುರಕ್ಷತೆ ಹಾಗೂ ಫಿಟ್‌ನೆಸ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಜವಾಬ್ದಾರಿಯಲ್ಲೂ ಲೋಪವಾಗಿದೆ ಎಂಬ ಆರೋಪದ ಹಿನ್ನೆಲೆ ಇಬ್ಬರು ಇಂಜಿನಿಯರ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಪಿ.ಆರ್.ಇ.ಡಿ. (PRED) ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ. ರೇವಡಿ ಹಾಗೂ ಜೂನಿಯರ್ ಇಂಜಿನಿಯರ್ ಎಸ್.ಎಂ. ಸಂಗನಾಳ ಅವರನ್ನು ಅಮಾನತುಗೊಳಿಸಲಾಗಿದೆ.

ಶಾಲಾ ಕಟ್ಟಡಕ್ಕೆ ಅಗತ್ಯವಿದ್ದ ಫಿಟ್‌ನೆಸ್ ಪ್ರಮಾಣಪತ್ರ ನೀಡುವಲ್ಲಿ ವಿಫಲರಾಗಿರುವುದು ಹಾಗೂ ಕಟ್ಟಡದ ಸುರಕ್ಷತಾ ಸ್ಥಿತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವ ಹಿನ್ನೆಲೆ ಇಬ್ಬರು ಇಂಜಿನಿಯರ್‌ಗಳ ವಿರುದ್ಧ ಅಮಾನತು ಆದೇಶ ಹೊರಡಿಸಲಾಗಿದೆ. ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ ಅವರು ಈ ಆದೇಶ ಹೊರಡಿಸಿದ್ದಾರೆ.

Exit mobile version