ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಅಂಗವಾಗಿ ಹಳೆ ಬಾಗಲಕೋಟೆಯಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಸಂಭ್ರಮದ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಈ ಘಟನೆ ವೇಳೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ದಾರ್ಥ್ ಗೋಯಲ್ ಅವರಿಗೆ ಕುತ್ತಿಗೆ ಗಾಯವಾಗಿದೆ.
ಶಿವಾಜಿ ಜಯಂತಿಯ ಪ್ರಯುಕ್ತ ವಿವಿಧ ಸಂಘಟನೆಗಳು ಹಾಗೂ ಯುವಕರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯನ್ನು ಆಯೋಜಿಸಿದ್ದರು. ಮೆರವಣಿಗೆ ಹಳೆ ಬಾಗಲಕೋಟೆಯ ಪಂಕಾ ಮಸೀದಿ ಪ್ರದೇಶದ ಬಳಿ ತಲುಪುತ್ತಿದ್ದಂತೆಯೇ ಏಕಾಏಕಿ ಕಲ್ಲು ತೂರಾಟ ಆರಂಭವಾಗಿದೆ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ತೀವ್ರಗೊಂಡು ಜನರಲ್ಲಿ ಆತಂಕ ಮೂಡಿತು.
ಘಟನಾ ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ಅವರು ಸ್ವತಃ ಹಾಜರಾಗಿದ್ದರು. ಇದೇ ವೇಳೆ ಕಿಡಿಗೇಡಿಗಳಿಂದ ತೂರಿದ ಕಲ್ಲು ಅವರ ಕುತ್ತಿಗೆ ಭಾಗಕ್ಕೆ ಬಿದ್ದಿದೆ.
ತಕ್ಷಣವೇ ಪೊಲೀಸ್ ಸಿಬ್ಬಂದಿ ಎಸ್ಪಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ. ಗಾಯಗೊಂಡಿದ್ದರೂ ಎಸ್ಪಿ ಸಿದ್ದಾರ್ಥ್ ಗೋಯಲ್ ಅವರು ಸ್ಥಳದಲ್ಲೇ ಉಳಿದುಕೊಂಡು ಪೊಲೀಸ್ ಸಿಬ್ಬಂದಿಗೆ ಸೂಚನೆಗಳನ್ನು ನೀಡುತ್ತಿದ್ದರು.
ಕಲ್ಲು ತೂರಾಟ ನಡೆದ ತಕ್ಷಣವೇ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಖಾಕಿ ಪಡೆ ಬೀಡುಬಿಟ್ಟು ಪಂಕಾ ಮಸೀದಿ ಸುತ್ತಮುತ್ತ ಪ್ರದೇಶದಲ್ಲಿ ಬಂದೋಬಸ್ತ್ ನೀಡಲಾಗಿದೆ. ಜನರನ್ನು ಚದುರಿಸಲು ಮತ್ತು ಅಶಾಂತಿ ತಡೆಯಲು ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡರು.
ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದ ಬಳಿಕ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.. ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ ನಡೆಸಿದವರ ಗುರುತಿನ ಪತ್ತೆ ಕಾರ್ಯವೂ ಪ್ರಾರಂಭಗೊಂಡಿದೆ ಎಂದು ತಿಳಿದುಬಂದಿದೆ.
