ಬೆಂಗಳೂರು ಆಗಸ್ಟ್ 13: ರಾಜ್ಯ ಸರ್ಕಾರ ಅಡಿಕೆಯಿಂದ ತಯಾರಾಗುವ ಗುಟ್ಕಾ ಮತ್ತು ಪಾನ್ ಮಸಾಲೆ ಉತ್ಪನ್ನಗಳ ನಿಷೇಧಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ. ಅಡಿಕೆಗೆ ಪರ್ಯಾಯ ಮಾರುಕಟ್ಟೆ ಹಾಗೂ ನ್ಯಾಯಯುತ ಬೆಲೆ ವ್ಯವಸ್ಥೆ ರೂಪಿಸುವವರೆಗೆ ನಿಷೇಧ ಜಾರಿಗೊಳಿಸಬಾರದು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಗುಟ್ಕಾ ಹಾಗೂ ಪಾನ್ ಮಸಾಲೆ ಉತ್ಪನ್ನಗಳ ಮೇಲಿನ ನಿಷೇಧದ ಪರಿಣಾಮ ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ಬೀಳುವ ಆತಂಕದ ಬಗ್ಗೆ ಆರಗ ಜ್ಞಾನೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಅಡಿಕೆ ಉತ್ಪಾದಿಸುವ ರಾಜ್ಯವಾಗಿದ್ದು, ರಾಷ್ಟ್ರದ ಒಟ್ಟು ಉತ್ಪಾದನೆಯಲ್ಲಿ ಸುಮಾರು 60 ಶೇಕಡಕ್ಕಿಂತ ಹೆಚ್ಚು ಪಾಲು ಹೊಂದಿದೆ. ಇಂತಹ ಸಂದರ್ಭದಲ್ಲಿ ಗುಟ್ಕಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆ ಕುಸಿಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ರಾಜ್ಯದ ಸುಮಾರು 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೇರವಾಗಿ ಅಡಿಕೆ ಬೆಳೆಯನ್ನೇ ಜೀವನಾಧಾರವಾಗಿಸಿಕೊಂಡಿವೆ. ಜೊತೆಗೆ ಸಾಗಣೆ, ಸಂಸ್ಕರಣೆ, ವ್ಯಾಪಾರ ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಅಪ್ರತ್ಯಕ್ಷವಾಗಿ ಈ ಉದ್ಯಮದ ಮೇಲೆ ಅವಲಂಬಿತವಾಗಿವೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ ಅಡಿಕೆ ಬೆಳೆ ವ್ಯಾಪಕವಾಗಿ ಬೆಳೆಯಲಾಗುತ್ತಿದೆ ಎಂದು ಅವರು ಹೇಳಿದರು.
ಅಡಿಕೆಯಿಂದ ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ರೂಪದಲ್ಲಿ ವರ್ಷಕ್ಕೆ ಸುಮಾರು 375 ಕೋಟಿ ರೂ. ಆದಾಯ ಬರುತ್ತದೆ. ಆದ್ದರಿಂದ ಅಡಿಕೆ ಬೆಳೆಯುವ ರಾಜ್ಯದಲ್ಲೇ ಈ ಉತ್ಪನ್ನಗಳಿಗೆ ಸಂಪೂರ್ಣ ನಿಷೇಧ ಹೇರುವುದು ಸೂಕ್ತವಲ್ಲ. ಮೊದಲು ಅಡಿಕೆಗೆ ಪರ್ಯಾಯ ಬಳಕೆ, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಬೆಳೆಗಾರರಿಗೆ ನ್ಯಾಯಯುತ ಬೆಲೆ ವ್ಯವಸ್ಥೆ ರೂಪಿಸಬೇಕು ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು.
ಈ ವಿಷಯವಾಗಿ ಮಲೆನಾಡು ಭಾಗದ ಎಲ್ಲ ಪಕ್ಷಗಳ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸರ್ಕಾರ ರಕ್ಷಣೆ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಸದನದಲ್ಲಿಯೂ ಈ ವಿಚಾರವನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಕಸ್ತೂರಿ ರಂಗನ್ ವರದಿ ಜಾರಿ ವಿಚಾರ
ಇದೇ ವೇಳೆ ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೂಡ ಅವರು ವಿರೋಧ ವ್ಯಕ್ತಪಡಿಸಿದರು. ಸೋಮವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಕರಾರು ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗುವುದು. ವರದಿ ಜಾರಿಯಾದರೆ ಪಶ್ಚಿಮ ಘಟ್ಟದ ಜನರ ಜೀವನೋಪಾಯ, ಕೃಷಿ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಗಂಭೀರ ತೊಂದರೆ ಉಂಟಾಗುತ್ತದೆ. ಈ ಹಿಂದೆ ಹಲವು ಸರ್ಕಾರಗಳೂ ವರದಿಗೆ ಸಂಪೂರ್ಣ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಈಗಿನ ಸರ್ಕಾರವೂ ಜನರ ಅಭಿಪ್ರಾಯ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
