ಆನೇಕಲ್: ಆನೇಕಲ್ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಪ್ರಸಿದ್ಧ ಕರಗ ಉತ್ಸವಕ್ಕೆ ಸಂಬಂಧಿಸಿದಂತೆ ಕುಲಸ್ಥರು ಮತ್ತು ಅರ್ಚಕರ ನಡುವಿನ ವಿವಾದ ತೀವ್ರಗೊಂಡಿದೆ. ಈ ವಿವಾದದ ಕಾರಣ ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಕರಗ ಹೊರುವ ಅಪೂರ್ವ ಘಟನೆ ನಡೆದಿದೆ.
ಹೈಕೋರ್ಟ್‌ನ ಆದೇಶದಂತೆ ಏಪ್ರಿಲ್ 1ರಂದು ಅರ್ಚಕರ ಪರವಾಗಿ ಪೂಜಾರಿ ರಮೇಶ್ ಅವರು ಕರಗ ಹೊತ್ತು ಉತ್ಸವ ನಡೆಸಿದ್ದರು. ಆದರೆ ಈಗ ಕುಲಸ್ಥರು ತಮ್ಮ ಪರವಾಗಿ ಮತ್ತೊಂದು ಕರಗ ಹೊರಡಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಇಂದು ರಾತ್ರಿ ಕುಲಸ್ಥರ ಕರಗ
ಕುಲಸ್ಥರ ಪರವಾಗಿ ಪೂಜಾರಿ ಚಂದ್ರಪ್ಪ ಅವರು ಕರಗ ಹೊರುವರು. ಇಂದು ರಾತ್ರಿ ಹಸಿಕರಗ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರು ಮತ್ತು ಎರಡೂ ಪಕ್ಷದ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿನೆರೆದಿರುತ್ತಾರೆ.
ಕುಲಸ್ಥರು ಹೇಳುವಂತೆ, ಸಾಂಪ್ರದಾಯಿಕವಾಗಿ ಕರಗ ಹೊರುವ ಹಕ್ಕು ಅವರದ್ದೇ ಆಗಿದೆ. ಆದರೆ ಅರ್ಚಕರು ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ತಾವೇ ಕರಗ ಹೊರಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ವಿವಾದದಿಂದಾಗಿ ಆನೇಕಲ್ ಪಟ್ಟಣದಲ್ಲಿ ತೀವ್ರ ಗೊಂದಲ ಉಂಟಾಗಿದೆ. ಏಪ್ರಿಲ್ 1ರಂದು ಅರ್ಚಕರು ನಡೆಸಿದ ಕರಗ ಉತ್ಸವದ ಬಳಿಕ ಮತ್ತೆ ಇಂದು ಕುಲಸ್ಥರು ಕರಗ ಹೊರಡಿಸುತ್ತಿರುವುದು ಸ್ಥಳೀಯರಲ್ಲಿ ಆಸಕ್ತಿ ಮತ್ತು ಆತಂಕವನ್ನು ಉಂಟುಮಾಡಿದೆ.
ದೇವಾಲಯ ಆಡಳಿತ ಮಂಡಳಿ ಮತ್ತು ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಹೆಚ್ಚಿನ ಭದ್ರತೆ ಏರ್ಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ಈ ವಿವಾದವು ದೇವಾಲಯದ ಸಾಂಪ್ರದಾಯಿಕ ಹಕ್ಕುಗಳು, ಕುಲಸ್ಥರು ಮತ್ತು ಅರ್ಚಕರ ನಡುವಿನ ಅಧಿಕಾರ ವ್ಯಾಪ್ತಿಯನ್ನು ಕೇಂದ್ರೀಕರಿಸಿ ತೀವ್ರ ಚರ್ಚೆಗೆ ಕಾರಣವಾಗಿದೆ. https://youtu.be/8GTiTykY08M
ಈ ರೀತಿಯಾದ ವಿವಾದ ಕಾರಣವಾಗಿ ಕರಗ ಉತ್ಸವವು ಎರೆಡು ಬಾರಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಆನೇಕಲ್ಲು ಪಟ್ಟಣದ ಜನ ಎರೆಡು ಬಾರಿ ಈ ಹೂವಿನ ಕರಗಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಅಭೂತಪೂರ್ವ ನಡೆ ಅರ್ಚಕರು ಮತ್ತು ಪೂಜಾರಿಗಳ ನಡುವಿನ ಹಗ್ಗ ಜಗ್ಗಾಟದಿಂದಾಗಿ ಈ ಬಾರಿ ಆನೇಕಲ್ಲು ಪಟ್ಟಣ ಎರೆಡೆರೆಡು ಬಾರಿ ಈ ಹೂವಿನ ಕರಗಕ್ಕೆ ಸಾಕ್ಷಿಯಾಗಲಿದೆ.
