ಚಿಕ್ಕಮಗಳೂರು, ಏಪ್ರಿಲ್ 4: ಮನೆಯಲ್ಲಿ ಮದುವೆ ಮಾಡಲಿಲ್ಲ, ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಮನನೊಂದ 26 ವರ್ಷದ ಕುರಿಗಾಹಿ ಯುವಕನೊಬ್ಬ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕ ಯಾರು?
ಮೃತ ಯುವಕನನ್ನು ಕುಮಾರ್ (26) ಎಂದು ಗುರುತಿಸಲಾಗಿದೆ. ಅವರು ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದವರಾಗಿದ್ದರು. ಕುಮಾರ್ ತಮ್ಮ ಪೋಷಕರೊಂದಿಗೆ ಶಿರಾದಿಂದ ಬಂದು ಕಡೂರು ತಾಲೂಕಿನ ಬಾಸೂರು ಬಳಿ ವಾಸಿಸುತ್ತಿದ್ದರು. ಅವರು ಹಳ್ಳಿ-ಹಳ್ಳಿಗಳಲ್ಲಿ ತಿರುಗಾಡುತ್ತಾ, ತೋಟದಲ್ಲಿ ಗೊಬ್ಬರಕ್ಕಾಗಿ ಕುರಿಮಂದೆಯನ್ನು ತೋಟದೊಳಗೆ ನಿಲ್ಲಿಸಿ ಹಣ ಗಳಿಸುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿಗಳನ್ನು ಬಿಟ್ಟುಕೊಂಡಿದ್ದರು.
ಮದುವೆ ಬೇಡಿಕೆ ಮತ್ತು ಪೋಷಕರ ಪ್ರತಿಕ್ರಿಯೆ:
ಕುಮಾರ್ ಅವರ ಪೋಷಕರಿಗೆ ಮೂವರು ಗಂಡು ಮಕ್ಕಳು. ಆ ಪೈಕಿ ಯಾರಿಗೂ ಮದುವೆಯಾಗಿರಲಿಲ್ಲ. ಕುಮಾರ್ ತಮ್ಮ ಪೋಷಕರ ಬಳಿ ಪದೇ ಪದೇ ಮದುವೆ ಮಾಡಿಸುವಂತೆ ಕೇಳುತ್ತಿದ್ದರು. ಆದರೆ ಪೋಷಕರು, “ನಿನ್ನ ಅಣ್ಣಂದಿರಿಗೆ ಇನ್ನೂ ಮದುವೆಯಾಗಿಲ್ಲ. ಹುಡುಗಿ ಸಿಗುತ್ತಿಲ್ಲ. ಅವರಿಗೆ ಮದುವೆಯಾದ ಮೇಲೆ ನಿನಗೆ ಮಾಡುತ್ತೇವೆ. ಅಣ್ಣಂದಿರ ಜೊತೆಗೇ ಒಟ್ಟಿಗೆ ಮದುವೆ ಮಾಡುತ್ತೇವೆ” ಎಂದು ಹೇಳಿದ್ದರು. ರಾಮನವಮಿ ಹಬ್ಬದ ಸಂದರ್ಭದಲ್ಲಿ ಕುಮಾರ್ ಮತ್ತೊಮ್ಮೆ ಮದುವೆಗೆ ಒತ್ತಾಯಿಸಿದ್ದರು. ಆದರೆ ಪೋಷಕರು ಅದೇ ಮಾತನ್ನು ಹೇಳಿ, ಅಲ್ಲಿಯವರೆಗೆ ಕುರಿ ಮೇಯಿಸಿಕೊಂಡು ಇರುವಂತೆ ಸೂಚಿಸಿದ್ದರು.
ಮಾನಸಿಕ ಖಿನ್ನತೆ ಮತ್ತು ದಾರುಣ ಅಂತ್ಯ
ಮದುವೆ ವಿಷಯದಲ್ಲಿ ಪದೇ ಪದೇ ಆಗುತ್ತಿದ್ದ ನಿರಾಕರಣೆಯಿಂದ ಕುಮಾರ್ ಮಾನಸಿಕವಾಗಿ ಕುಗ್ಗಿದ್ದರು. ಅವರು ಮದ್ಯ ಸೇವನೆಗೆ ವ್ಯಸನಿಯಾಗಿದ್ದರು. ಇದೇ ಮನಸ್ಥಿತಿಯಲ್ಲಿ, ಮದ್ಯ ಸೇವಿಸಿದ ನಂತರ ಬೋರಗಾನಹಳ್ಳಿ ಗ್ರಾಮದ ತೋಟದಲ್ಲಿದ್ದ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳೀಯರು ಮತ್ತು ತೋಟದ ಮಾಲೀಕರು ಸ್ಥಳದಲ್ಲಿ ಕುಮಾರ್ ಅನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರ ಕ್ರಮ
ಯಗಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮಕ್ಕೆ ಅಂತ್ಯಕ್ರಿಯೆಗಾಗಿ ರವಾನಿಸಲಾಗಿದೆ.
