ಬೆಂಗಳೂರು, ಏಪ್ರಿಲ್ 19 : ಟಿವಿಯಲ್ಲಿ ಟಾಮ್ ಆ್ಯಂಡ್ ಜೆರ್ರಿ ನೋಡಿ, ಆಟದ ಮೈದಾನದಲ್ಲಿ ಚಿನ್ನಿದಾಂಡು ಆಡುವ ವಯಸ್ಸಿನಲ್ಲಿ, ಬೆಂಗಳೂರಿನ 9 ವರ್ಷದ ಬಾಲಕಿ ವಿಹಾನ ಆನಂದ್, ವಿಶ್ವದ ಎತ್ತರವಾದ ಪರ್ವತ ಶಿಖರ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರಿದ ಸಾಧನೆಯ ಮೂಲಕ ಎಲ್ಲರಿಗೂ ಸ್ಫೂರ್ತಿಯಾದಳು.
ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆನಂದ್ ಎಂಬವರ ಪುತ್ರಿಯಾಗಿರುವ ವಿಹಾನ, ಈ ಸಾಹಸಯಾನವನ್ನು ಏಪ್ರಿಲ್ 3 ರಂದು ತನ್ನ ತಂದೆಯ ಜೊತೆ ಆರಂಭಿಸಿ, ಏಪ್ರಿಲ್ 12ರಂದು ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದರು. ಸಮುದ್ರ ಮಟ್ಟದಿಂದ 5364 ಮೀಟರ್ (ಅಂದರೆ 17,598 ಅಡಿ) ಎತ್ತರದಲ್ಲಿ ನೆಲೆಸಿರುವ ಈ ಶಿಬಿರ ತಲುಪುವುದು ಸವಾಲಿನ ಕೆಲಸ. ಅಲ್ಲದೆ, ತೀವ್ರ ತಣ್ಣನೆಯ ಮೈನಸ್ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಟ್ರಕ್ಕಿಂಗ್ ಮಾಡುವುದು ವಿಹಾನಗೆ ವಿಭಿನ್ನ ಅನುಭವವಾಯಿತು.
10 ದಿನಗಳ ಸಾಹಸಯಾನ
ವಿಹಾನ ಮತ್ತು ಆನಂದ್, ಬೆಂಗಳೂರಿನಿಂದ ನೇಪಾಳದ ಕಠ್ಮಂಡುಗೆ ಪ್ರಯಾಣ ಮಾಡಿ, ಅಲ್ಲಿ ವಿಮಾನದಲ್ಲಿ ಲುಕ್ಲಾ ಎಂಬ ಪರ್ವತಪ್ರದೇಶ ತಲುಪಿದರು. ಲುಕ್ಲಾದಿಂದ ಫಾಕ್ಡಿಂಗ್, ನಮ್ಚೆ ಬಜಾರ್, ಡಿಂಗ್‌ಬೊಚೆ, ಲೊಬುಚೆ, ಗೋರಕ್‌ಶೆಪ್ ಮಾರ್ಗವಾಗಿ ಬೇಸ್ ಕ್ಯಾಂಪ್ ತಲುಪಿದ ಅವರು, ಪ್ರತಿ ದಿನ ಸರಾಸರಿ 10-12 ಕಿಲೋಮೀಟರ್ ಕಾಲ್ನಡಿಗೆ ಮಾಡಿದ್ಧರು. ಒಟ್ಟು 130 ಕಿಮೀ ದೂರದ ಟ್ರಕ್ಕಿಂಗ್ ಪೂರೈಸಿದ ವಿಹಾನ ಪ್ರತಿದಿನ ಸುಮಾರು 12 ಗಂಟೆಗಳ ಕಾಲ ನಡೆಯಬೇಕಾಗಿತ್ತು. ತೀವ್ರ ಶೀತದಿಂದ ರಕ್ಷಿಸಲು ಐದು ಪದರದ ಉಡುಪು ಧರಿಸಿ, ಶ್ವಾಸಕೋಶದ ಮೇಲೆ ಒತ್ತಡ ಬರುವ ತೂಕದ ಬ್ಯಾಗ್ ಹೊತ್ತು ಬೆಟ್ಟ ಹತ್ತಿದರು.
ವಿಹಾನ ಬೆಟ್ಟ ಹತ್ತುವಾಗ ತೋರಿಸಿದ ಧೈರ್ಯ, ಉತ್ಸಾಹ ಕಂಡು ಇತರ ಟ್ರಕ್ಕಿಂಗ್ ಸದಸ್ಯರೂ ಆಶ್ಚರ್ಯಪಟ್ಟು ಮೆಚ್ಚಿದರು. ತನ್ನ ಮಗಳ ಈ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಆನಂದ್, “ಈ 10 ದಿನಗಳು ನನಗೂ, ಮಗಳಿಗೂ ಜೀವನದಲ್ಲಿ ಮರೆಯಲಾರದ ಕ್ಷಣಗಳಾಗಿವೆ,” ಎಂದು ಹೇಳಿಕೊಂಡದರು.
ಸಿದ್ಧತೆ ಮತ್ತು ತರಬೇತಿ
ಈ ಸಾಹಸಕ್ಕಾಗಿ ವಿಹಾನ ಮತ್ತು ಆನಂದ್ ಇಬ್ಬರೂ ಎರಡು ತಿಂಗಳ ಕಾಲ ಟ್ರಕ್ಕಿಂಗ್ ತಜ್ಞರಿಂದ ತರಬೇತಿ ಪಡೆದಿದ್ದರು. ಪ್ರತಿದಿನ 7-8 ಕಿಲೋಮೀಟರ್ ನಡಿಗೆ ಮಾಡುವುದು, ಉಸಿರಾಟದ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ, ಪರ್ವತ ಪ್ರವೇಶದ ತಂತ್ರಗಳ ಅಭ್ಯಾಸ ಮಾಡಿದ್ದರು.
ಖರ್ಚು ವಿವರ
ಈ 10 ದಿನಗಳ ಯಾತ್ರೆಗೆ ಒಟ್ಟು ₹6 ಲಕ್ಷ ವೆಚ್ಚವಾಯಿತು. ಲುಕ್ಲಾದಿಂದ ಮೇಲಕ್ಕೆ ಹೋಗುತ್ತಿದ್ದಂತೆ ನೀರು, ಆಹಾರ, ಇಂಟರ್ನೆಟ್, ಮೊಬೈಲ್ ಚಾರ್ಜ್ ಮುಂತಾದ ಸೇವೆಗಳ ಬೆಲೆ ಸಹ ಗಗನಕ್ಕೇರುತ್ತದೆ. ಒಂದು ಬಾಟಲ್ ನೀರಿಗೆ ₹500, ಒಂದು ಊಟಕ್ಕೆ ₹1500, ಚಾರ್ಜ್ ಮಾಡಲು ₹500 ನೀಡಬೇಕಾಗುತ್ತದೆ ಎಂದು ಆನಂದ್ ವಿವರಿಸಿದ್ದಾರೆ.
ಕಿರಿಯ ಸಾಧಕರಲ್ಲಿ ವಿಹಾನ
ವಿಹಾನ ಬೆಂಗಳೂರಿನ 2ನೇ ಅತಿ ಕಿರಿಯ ಎವರೆಸ್ಟ್ ಬೇಸ್ ಕ್ಯಾಂಪ್ ಏರುವ ಬಾಲಕಿ. ಮೊದಲ ಸ್ಥಾನದಲ್ಲಿ ಆದ್ಯಾ ಬೆನ್ನೂರು ಎಂಬ ಬಾಲಕಿ 8ರ ಹರೆಯದಲ್ಲೇ ಈ ಸಾಧನೆ ಮಾಡಿದ್ದಾಳೆ. ವಿಹಾನ ಇದೀಗ ಭಾರತದಲ್ಲಿ ಟಾಪ್-10 ಕಿರಿಯ ಪರ್ವತಾರೋಹಕರಲ್ಲಿ ಸ್ಥಾನ ಪಡೆದಿದ್ದಾಳೆ.
