ನೇಪಾಳ ಜಲಪ್ರಳಯದಿಂದ ಪಾರಾದ 54 ಕನ್ನಡಿಗರು ತಾಯ್ನಾಡಿಗೆ

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು ಚಾಲಕ ಪಾರು! (12)

ಬೆಂಗಳೂರು ಆ 29: ನೇಪಾಳದಲ್ಲಿ ಸಂಭವಿಸಿದ ರಣ ಭೀಕರ ಜಲಪ್ರಳಯದ ನಡುವೆ ಸಿಲುಕಿದ್ದ ಕನ್ನಡಿಗರಿಗೆ ಕೊನೆಗೂ ನೆಮ್ಮದಿ ಸಿಕ್ಕಿದೆ. ಪ್ರವಾಹದ ಅಪಾಯದಿಂದ ಪಾರಾದ 54 ಮಂದಿ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಹಾವೇರಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ 54 ಮಂದಿ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಆದರೆ ಆಗಸ್ಟ್ 26ರಂದು ನೇಪಾಳ–ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಫ್ಲ್ಯಾಶ್ ಫ್ಲಡ್ ಪ್ರವಾಸಿಗರನ್ನು ಆತಂಕಕ್ಕೀಡು ಮಾಡಿತ್ತು.

ವಿಶೇಷವಾಗಿ ಭೋಟೆಕೋಶಿ ನದಿ ಪ್ರದೇಶದಲ್ಲಿ ಪ್ರವಾಹದ ರಭಸಕ್ಕೆ ರಸ್ತೆಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯಗಳು ಕೊಚ್ಚಿ ಹೋಗಿದ್ದವು. ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಕರ್ನಾಟಕ ಸರ್ಕಾರವೂ ನೇಪಾಳದಲ್ಲಿ ಸಿಲುಕಿದ್ದ ರಾಜ್ಯದವರ ಸುರಕ್ಷಿತ ವಾಪಸಾತಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಉತ್ತರ ಪ್ರದೇಶದ ಗೋರಖ್‌ಪುರದಿಂದ ಬೆಂಗಳೂರಿಗೆ ಆಗಮಿಸಿದ 54 ಮಂದಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಾಯ್ನಾಡು ತಲುಪಿದ್ದಾರೆ.

ಪ್ರವಾಹದ ಭೀಕರತೆಯಿಂದ ಪಾರಾಗಿ ಸುರಕ್ಷಿತವಾಗಿ ಮನೆ ಸೇರಿರುವುದಕ್ಕೆ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ. ನೇಪಾಳದಲ್ಲಿ ಎದುರಾದ ಅನುಭವವನ್ನು ಹಂಚಿಕೊಂಡ ಅವರು, “ದೇವರ ದಯೆಯಿಂದ ಮತ್ತೆ ಬದುಕಿ ಬಂದಿದ್ದೇವೆ. ಇದು ನಮಗೆ ಪುನರ್ಜನ್ಮದಂತಾಗಿದೆ” ಎಂದು ಹೇಳಿದ್ದಾರೆ.

ಅರ್ಧ ಗಂಟೆಯ ಟೀ ಬ್ರೇಕ್‌ ಜೀವ ಉಳಿಸಿತು!

ಈ ಪ್ರವಾಸದಲ್ಲಿ ನಡೆದ ಒಂದು ಘಟನೆ ಪ್ರವಾಸಿಗರ ಪಾಲಿಗೆ ಮಹತ್ವದ ತಿರುವಾಗಿದೆ. ಪ್ರವಾಹದ ದಾರಿಯಲ್ಲಿ ಸಾಗುತ್ತಿದ್ದ ಕನ್ನಡಿಗರು ಮಾರ್ಗಮಧ್ಯೆ ಟೀ ಕುಡಿಯಲು ತೆರಳಿ ಸುಮಾರು ಅರ್ಧ ಗಂಟೆ ತಡವಾಗಿದ್ದರು.

ಅದೇ ಅವಧಿಯಲ್ಲಿ ಮುಂದೆ ಭೀಕರ ಪ್ರವಾಹ ಸಂಭವಿಸಿರುವ ಮಾಹಿತಿ ಲಭಿಸಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಮುಂದೆ ಸಾಗಿದ್ದರೆ ಪ್ರವಾಹಕ್ಕೆ ಸಿಲುಕುವ ಸಾಧ್ಯತೆಯಿತ್ತು ಎಂದು ಪ್ರವಾಸಿಗರು ತಿಳಿಸಿದ್ದಾರೆ.

ಪ್ರವಾಹದ ನಡುವೆ ಎದುರಾದ ಆತಂಕ, ಸಂಪರ್ಕ ಕಡಿತ ಹಾಗೂ ತಾಯ್ನಾಡಿಗೆ ಮರಳುವ ಅನಿಶ್ಚಿತತೆಯ ಬಳಿಕ 54 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿರುವುದು ಅವರ ಕುಟುಂಬಸ್ಥರಿಗೆ ದೊಡ್ಡ ನೆಮ್ಮದಿ ತಂದಿದೆ.

Exit mobile version