ಮೈಸೂರು (ಏಪ್ರಿಲ್ 21): ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಅಂತರವೂ ಅಲ್ಲ ಎಂಬ ಮಾತಿಗೆ ಮತ್ತೊಂದು ಉದಾಹರಣೆ ಸೇರಿದೆ. ಮೈಸೂರಿನಲ್ಲಿ 37 ವರ್ಷದ ಮಹಿಳೆಯೊಬ್ಬರು 22 ವರ್ಷದ ಯುವಕನ ಪ್ರೀತಿಗೆ ಸಿಲುಕಿ, ತಮ್ಮ 14 ವರ್ಷದ ಮಗನನ್ನೇ ಬಿಟ್ಟು ಮನೆ ತೊರೆದಿದ್ದಾರೆ. ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದು, ಇದೀಗ ಜೀವ ಬೆದರಿಕೆ ಹಿನ್ನೆಲೆ ಮೈಸೂರಿನ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ.
ದೇವಸ್ಥಾನದ ಪರಿಚಯವೇ ಪ್ರೀತಿಗೆ ನಾಂದಿ
ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಕವಿತಾ (37) ಎಂಬುವವರ ಪತಿ 8 ವರ್ಷಗಳ ಹಿಂದೆ ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ತೀರಿಕೊಂಡಿದ್ದರು. ಕವಿತಾ ತಮ್ಮ 14 ವರ್ಷದ ಮಗನೊಂದಿಗೆ ತವರು ಮನೆಯಲ್ಲಿದ್ದುಕೊಂಡು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆಯಲ್ಲಿ ಮೈಸೂರಿನ ರಮ್ಮನಹಳ್ಳಿ ನಿವಾಸಿ ಭಾಸ್ಕರ್ (22) ಎಂಬ ಯುವಕನ ಪರಿಚಯವಾಯಿತು. ಭಾಸ್ಕರ್ ಬೆಂಗಳೂರಿನಲ್ಲಿ ಟಿಟಿ ಮತ್ತು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತಮ್ಮ ದೊಡ್ಡಮ್ಮನ ಮನೆಯಲ್ಲಿದ್ದರು.
ಭಾಸ್ಕರ್ ಆಗಾಗ್ಗೆ ಕವಿತಾ ಮತ್ತು ಅವರ ತಾಯಿ ಭಾಗ್ಯಮ್ಮನವರನ್ನು ಬಂಡೆ ಮಾಕಾಳಮ್ಮ ದೇವಸ್ಥಾನಕ್ಕೆ ಆಟೋದಲ್ಲಿ ಕರೆದೊಯ್ಯುತ್ತಿದ್ದರು. ಹೀಗೆ ದೇವಸ್ಥಾನದ ಯಾತ್ರೆಗಳ ಸಂದರ್ಭದಲ್ಲೇ ಇಬ್ಬರ ನಡುವೆ ಸ್ನೇಹ ಬೆಳೆದು, ಕ್ರಮೇಣ ಪ್ರೀತಿಗೆ ತಿರುಗಿತ್ತು. ವರ್ಷಗಳ ಕಾಲ ರಹಸ್ಯವಾಗಿ ಪ್ರೀತಿ ಸಾಗಿತ್ತು.
ಮಗನನ್ನು ಬಿಟ್ಟು ಪ್ರೇಮಿಯ ಜೊತೆ ಪರಾರಿ
ಕವಿತಾ ಅವರನ್ನು ಕುಟುಂಬಸ್ಥರು ಬೇರೊಬ್ಬನ ಜೊತೆ ಮದುವೆ ಮಾಡಲು ಮುಂದಾದಾಗ, ಆಕೆ ನಿರ್ಧಾರ ಕೈಗೊಂಡರು. ತಮ್ಮ 14 ವರ್ಷದ ಮಗನನ್ನು ತವರು ಮನೆಯಲ್ಲೇ ಬಿಟ್ಟು, ಪ್ರೇಮಿ ಭಾಸ್ಕರ್ ಜೊತೆ ಮೈಸೂರಿಗೆ ಓಡಿಹೋಗಿದ್ದಾರೆ. ಈ ಜೋಡಿ ಮೈಸೂರಿನ ಒಂಟಿಕೊಪ್ಪಲು ವೆಂಕಟೇಶ್ವರ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯೂ ಆಗಿದ್ದಾರೆ. ವಯಸ್ಸಿನ ಅಂತರವನ್ನು ಲೆಕ್ಕಿಸದೆ ಇಬ್ಬರೂ ಸಂಸಾರ ಹೂಡಿದ್ದಾರೆ.
ಕಿಡ್ನ್ಯಾಪ್ ದೂರು ಮತ್ತು ಜೀವಬೆದರಿಕೆ ಆರೋಪ
ಇತ್ತ ಬೆಂಗಳೂರಿನ ಕುಂಬಳಗೋಡಿನಲ್ಲಿ ಕವಿತಾ ಅವರ ತಂದೆ ಮಲ್ಲಿಕಾರ್ಜುನ್ ಅವರು, ಮಗಳನ್ನು ಭಾಸ್ಕರ್ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪ್ರೇಮಿಗಳು ತಮ್ಮ ಸ್ವ ಇಚ್ಛೆಯಿಂದ ಒಟ್ಟಿಗೆ ಬಂದಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ ಕವಿತಾ ಮತ್ತು ಭಾಸ್ಕರ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಕವಿತಾ ಅವರ ಮಾವನ ಮಗ (ಗಂಡನ ಅಣ್ಣ ಅಥವಾ ತಮ್ಮನ ಮಗ) ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಭಯದಿಂದಲೇ ತಾವು ಬೆಂಗಳೂರನ್ನು ಬಿಟ್ಟು ಮೈಸೂರಿನ ರಮ್ಮನಹಳ್ಳಿಯಲ್ಲಿ ಅಡಗಿಕೊಂಡಿದ್ದೇವೆ ಎಂದಿದ್ದಾರೆ. ಆದರೆ ಬೆದರಿಕೆ ಮುಂದುವರಿದ ಹಿನ್ನಲೆ, ರಕ್ಷಣೆ ಕೋರಿ ಮೈಸೂರಿನ ಎಸ್ಪಿ ಕಚೇರಿಗೆ ದೂರು ನೀಡಲು ಬಂದಿದ್ದಾರೆ.
ಈ ಜೋಡಿ ತಮ್ಮ ಪ್ರೀತಿಯನ್ನು ಸಮರ್ಥಿಸಿಕೊಳ್ಳುತ್ತಾ, “ನಮ್ಮಿಬ್ಬರಿಗೂ ಪರಸ್ಪರ ಇಷ್ಟವಾಗಿದೆ. ನಾವು ತಪ್ಪೇನೂ ಮಾಡಿಲ್ಲ. ಆದರೆ ಕುಟುಂಬದವರು ನಮ್ಮನ್ನು ದೂರ ಮಾಡಲು ಯತ್ನಿಸುತ್ತಿದ್ದಾರೆ. ನಮಗೆ ಜೀವ ರಕ್ಷಣೆ ಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.
