ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಚರಣೆ ಮಾಡಿದ್ದಾರೆ. ಒಂದು ವಾರದಿಂದ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಉಪವಿಭಾಗಗಳಲ್ಲಿ ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 34 ಮಂದಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಆಗ್ನೇಯ ಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ಹಠಾತ್ ದಾಳಿ ನಡೆಸಿದ್ದರು. ಈ ವೇಳೆ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸವಿದ್ದವರನ್ನು ಪತ್ತೆಹಚ್ಚಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಮಂದಿ, ಹೆಬ್ಬಗೋಡಿ ವ್ಯಾಪ್ತಿಯಲ್ಲಿ 16 ಮಂದಿ ಮತ್ತು ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಂದಿಯನ್ನು ಅಕ್ರಮ ವಲಸಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ಯಾವುದೇ ಅಧಿಕೃತ ವೀಸಾ ಅಥವಾ ಪಾಸ್‌ಪೋರ್ಟ್ ಹೊಂದಿರದೆ ಗುಟ್ಟಾಗಿ ಶೇಡ್‌ಗಳಲ್ಲಿ ವಾಸಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಬಾಂಗ್ಲಾದೇಶಿಗಳಷ್ಟೇ ಅಲ್ಲದೆ, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಡೊಳ್ಯಾರೋ (34) ಮತ್ತು ಮಾನ್ಯುಯಲ್ ನಾಜುಬಿ (32) ಎಂಬುವವರೇ ಬಂಧಿತ ಅಕ್ರಮ ವಲಸಿಗರಾಗಿದ್ದಾರೆ. ಇವರು ಸ್ಟೂಡೆಂಟ್ ವೀಸಾದ ಅಡಿಯಲ್ಲಿ ಭಾರತಕ್ಕೆ ಬಂದಿದ್ದರು. ಆದರೆ ವೀಸಾ ಅವಧಿ ಮುಗಿದಿದ್ದರೂ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಬಾಂಗ್ಲಾ ವಲಸಿಗರನ್ನು ಹುಡುಕಲು ಹೋದ ಪೊಲೀಸರಿಗೆ ಈ ನೈಜೀರಿಯಾ ಪ್ರಜೆಗಳ ಅಕ್ರಮ ವಾಸ್ತವ್ಯದ ಬಗ್ಗೆ ಮಾಹಿತಿ ಸಿಕ್ಕಿದೆ.
‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಮಹಿಳೆ ಅರೆಸ್ಟ್:
ಈ ಇಡೀ ಕಾರ್ಯಾಚರಣೆಯಲ್ಲಿ ಅತ್ಯಂತ ಗಮನಾರ್ಹ ಘಟನೆ ನಡೆದಿದ್ದು ಹುಲಿಮಂಗಲದಲ್ಲಿ. ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ಪಶ್ಚಿಮ ಬಂಗಾಳ ಮೂಲದ ಸರ್ಬಾನು ಖಾತುನ್ (25) ಎಂಬಾಕೆ ಪೊಲೀಸರೆದುರೇ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾಳೆ. ಹುಲಿಮಂಗಲದ ಪೊಡು ಸಮೀಪದ ಶೇಡ್‌ನಲ್ಲಿ ವಾಸವಿದ್ದ ಈಕೆಯ ಮೇಲೆ ಹಿಂದೂ ಕಾರ್ಯಕರ್ತರು ಕೂಡ ಈ ಹಿಂದೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಹೊರವಲಯಗಳಲ್ಲಿ, ವಿಶೇಷವಾಗಿ ಐಟಿ ಹಬ್‌ಗಳ ಸಮೀಪವಿರುವ ಶೇಡ್‌ಗಳಲ್ಲಿ ಸಾವಿರಾರು ಸಂಖ್ಯೆಯ ವಲಸಿಗರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಕ್ರಮ ವಲಸಿಗರು ಸೇರಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ಮೂಲ ಮತ್ತು ನೆರವು ನೀಡಿದವರ ಬಗ್ಗೆ ತನಿಖೆ ಮುಂದುವರಿದಿದೆ. ನಗರದಾದ್ಯಂತ ಇಂತಹ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
