ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಬಿಗಿ ಪೊಲೀಸ್ ಬಂದೋಬಸ್ತ್

ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆ-1 (2nd PUC Exam) ಇಂದು ಅತ್ಯಂತ ಬಿಗಿ ಭದ್ರತೆಯೊಂದಿಗೆ ಆರಂಭವಾಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಈ ಮಹತ್ವದ ಪರೀಕ್ಷೆಗೆ ಈ ಬಾರಿ ರಾಜ್ಯಾದ್ಯಂತ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇಂದು ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ.

7.10 ಲಕ್ಷ ವಿದ್ಯಾರ್ಥಿಗಳು, 1,217 ಕೇಂದ್ರಗಳು

ಈ ಸಾಲಿನ ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಒಟ್ಟು 1,217 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಎಲ್ಲೂ ಯಾವುದೇ ಗೊಂದಲ ಅಥವಾ ಅಕ್ರಮಗಳಿಗೆ ಅವಕಾಶವಾಗದಂತೆ ಇಲಾಖೆ ಸರ್ವ ಸಿದ್ಧತೆ ಮಾಡಿಕೊಂಡಿದೆ. ಮೊದಲ ದಿನವಾದ ಇಂದು (ಫೆಬ್ರವರಿ 28) ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಗಳು ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ಮುಂದುವರಿಯಲಿದೆ.

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶುಭ ಹಾರೈಕೆ

ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಶುಭಾಶಯ ಕೋರಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭ ಹಾರೈಕೆಗಳು. ಭಯಪಡದೆ, ಪೂರ್ಣ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ನಿಮ್ಮ ಶ್ರಮಕ್ಕೆ ತಕ್ಕ ಉತ್ತಮ ಅಂಕಗಳು ಲಭಿಸಲಿ ಮತ್ತು ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಸಿಎಂ ಹಾರೈಸಿದ್ದಾರೆ.

ಪರೀಕ್ಷಾ ಮಂಡಳಿಯ ಕಠಿಣ ಮುನ್ನೆಚ್ಚರಿಕೆ ಕ್ರಮಗಳು

ಇನ್ನು ಈ ಬಾರಿಯ ಪರೀಕ್ಷೆಗೆ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಝೀರೋ ಟಾಲರೆನ್ಸ್ ನೀತಿಯನ್ನು ಅನುಸರಿಸುತ್ತಿವೆ. ಈ ಬಾರಿ ಕೈಗೊಂಡಿರುವ ಪ್ರಮುಖ ಕ್ರಮಗಳು ಇಲ್ಲಿವೆ:

ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವ ವೇಳೆ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ನಿಗದಿತ ಸಮಯಕ್ಕಿಂತ ಮೊದಲು ಪ್ರಶ್ನೆ ಪತ್ರಿಕೆಗಳನ್ನು ತೆರೆಯುವುದು ಶಿಕ್ಷಾರ್ಹ ಅಪರಾಧ ಎಂದು ಇಲಾಖೆ ಎಚ್ಚರಿಸಿದೆ.

ದ್ವೀತಿಯ ಪಿಯುಸಿ ಪರೀಕ್ಷೆ 1 ವೇಳಾಪಟ್ಟಿ

ಫೆಬ್ರವರಿ 28- ಕನ್ನಡ, ಅರೇಬಿಕ್
ಮಾರ್ಚ್ 2- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ.
ಮಾರ್ಚ್ 3- ಇಂಗ್ಲೀಷ್
ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
ಮಾರ್ಚ್ 5- ಇತಿಹಾಸ
ಮಾರ್ಚ್ 6- ಭೌತಶಾಸ್ತ್ರ
ಮಾರ್ಚ್ 7- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ.
ಮಾರ್ಚ್ 9- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10- ಅರ್ಥಶಾಸ್ತ್ರ
ಮಾರ್ಚ್ 11- ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12- ಹಿಂದಿ
ಮಾರ್ಚ್ 13- ರಾಜ್ಯಶಾಸ್ತ್ರ
ಮಾರ್ಚ್ 14- ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16- ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ.
ಮಾರ್ಚ್ 17- ಹಿಂದೂಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ

Exit mobile version