ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್

Untitled design 2026 03 23T222656.130

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಇರಾನ್-ಇಸ್ರೇಲ್ ಯುದ್ಧವು ಕೇವಲ ಅಂತಾರಾಷ್ಟ್ರೀಯ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಾಗದೇ, ಅದು ಬೆಂಗಳೂರಿನ ಸಾಮಾನ್ಯ ಡೆಲಿವರಿ ಬಾಯ್ಸ್ ಮೇಲೂ ಭಾರಿ ಹೊಡೆತ ನೀಡಿದೆ. ಯುದ್ಧದ ಪರಿಣಾಮವಾಗಿ ಉಂಟಾಗಿರುವ ಇಂಧನ ಬೆಲೆ ಏರಿಕೆ ಮತ್ತು ವಾಣಿಜ್ಯ ಅನಿಲ (LPG) ಅಭಾವದಿಂದಾಗಿ ಹೋಟೆಲ್ ಉದ್ಯಮ ಕಂಗಾಲಾಗಿದ್ದು, ಇದನ್ನು ನಂಬಿಕೊಂಡಿದ್ದ ಸಾವಿರಾರು ಫುಡ್ ಡೆಲಿವರಿ ಬಾಯ್ಸ್ (Food Delivery Boys) ಈಗ ಕೆಲಸವಿಲ್ಲದೆ ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ.

ಹೋಟೆಲ್ ಮೆನು ಕಡಿತ, ಆನ್‌ಲೈನ್ ಆರ್ಡರ್ ಬಂದ್

ಕಳೆದ ಎರಡು ವಾರಗಳಿಂದ ರಾಜ್ಯಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವ ಉಂಟಾಗಿದೆ. ಇದರಿಂದಾಗಿ ಹೋಟೆಲ್‌ಗಳಲ್ಲಿ ಪೂರ್ಣ ಪ್ರಮಾಣದ ಮೆನು ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ. ಹಲವು ಪ್ರಸಿದ್ಧ ಹೋಟೆಲ್‌ಗಳು ಅನಿವಾರ್ಯವಾಗಿ ಆನ್‌ಲೈನ್ ಫುಡ್ ಪಾರ್ಸಲ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಪರಿಣಾಮವಾಗಿ, ಸ್ವಿಗ್ಗಿ, ಜೊಮ್ಯಾಟೋದಂತಹ ಆ್ಯಪ್‌ಗಳ ಮೂಲಕ ಬರುತ್ತಿದ್ದ ಆರ್ಡರ್‌ಗಳ ಸಂಖ್ಯೆಯಲ್ಲಿ ಶೇ.40 ರಷ್ಟು ಭಾರಿ ಕುಸಿತ ಕಂಡುಬಂದಿದೆ.

12 ಗಂಟೆ ಕಾದರೂ ಸಿಗುತ್ತಿಲ್ಲ 20 ಆರ್ಡರ್

ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಗಿಗ್ ವರ್ಕರ್ಸ್ (Gig Workers) ಇದ್ದಾರೆ. ಯುದ್ಧದ ಎಫೆಕ್ಟ್‌ನಿಂದಾಗಿ ಪೆಟ್ರೋಲ್ ಬೆಲೆ ಏರಿಕೆಯಾಗಿ ಒಂದು ಕಡೆ ಸಾರಿಗೆ ವೆಚ್ಚ ಹೆಚ್ಚಾಗಿದ್ದರೆ, ಇನ್ನೊಂದೆಡೆ ಆರ್ಡರ್‌ಗಳೇ ಸಿಗುತ್ತಿಲ್ಲ. ಈ ಹಿಂದೆ ದಿನಕ್ಕೆ 30 ರಿಂದ 35 ಆರ್ಡರ್ ಮಾಡುತ್ತಿದ್ದ ಡೆಲಿವರಿ ಬಾಯ್ಸ್, ಈಗ 12 ಗಂಟೆಗಳ ಕಾಲ ರಸ್ತೆಯಲ್ಲೇ ಕಾದರೂ 20 ಆರ್ಡರ್ ಮಾಡಲು ಹೆಣಗಾಡುತ್ತಿದ್ದಾರೆ. ದಿನಕ್ಕೆ ಸಾವಿರ ರೂಪಾಯಿ ದುಡಿಯುವುದು ಕೂಡ ಈಗ ಕಷ್ಟವಾಗಿದೆ ಎಂದು ಕೆಲಸಗಾರರು ಅಳಲು ತೋಡಿಕೊಂಡಿದ್ದಾರೆ.

ಬೆಲೆ ಏರಿಕೆ ಮತ್ತು ಕೆಲಸದ ಅಭಾವದಿಂದ ಕಂಗಾಲಾಗಿರುವ ಕಾರ್ಮಿಕರಿಗೆ ಸರ್ಕಾರವೇ ವಿಶೇಷ ಪರಿಹಾರ ನೀಡಬೇಕು ಎಂದು ‘ಕರ್ನಾಟಕ ಆ್ಯಪ್ ಆಧಾರಿತ ವರ್ಕರ್ಸ್ ಯೂನಿಯನ್’ ಮತ್ತು ‘ಗಿಗ್ ವರ್ಕರ್ಸ್ ಯೂನಿಯನ್’ ಒತ್ತಾಯಿಸಿವೆ. ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ ಗ್ಯಾಸ್ ಪೂರೈಕೆಯನ್ನು ಸರಿಪಡಿಸದಿದ್ದರೆ ಈ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

Exit mobile version