ಉದ್ಯೋಗಿಗಳಿಗೆ ಶಾಕ್‌ ! ಅಮೆಜಾನ್‌ನಲ್ಲಿ ಮತ್ತೆ 14 ಸಾವಿರ ಹುದ್ದೆಗಳಿಗೆ ಕತ್ತರಿ

Untitled design 2026 01 23T161954.653

ಜಾಗತಿಕ ಇ-ಕಾಮರ್ಸ್‌ನ ದೈತ್ಯ ಅಮೆಜಾನ್ (Amazon) ತನ್ನ ವೆಚ್ಚ ಕಡಿತ ಮತ್ತು ಆಂತರಿಕ ಪುನರ್ರಚನೆಯ ಭಾಗವಾಗಿ ಮತ್ತೊಂದು ಸುತ್ತಿನ ಬೃಹತ್ ಉದ್ಯೋಗ ವಜಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಯಿಟರ್ಸ್ ವರದಿಯ ಪ್ರಕಾರ, ಮುಂದಿನ ವಾರ ಅಂದರೆ ಜನವರಿ 27 ರಿಂದ ಅಮೆಜಾನ್ ಸುಮಾರು 14,000 ಕಾರ್ಪೊರೇಟ್ (White-collar) ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದು ಕಂಪನಿಯ ಒಟ್ಟು ಕಾರ್ಪೊರೇಟ್ ಉದ್ಯೋಗಿಗಳ ಸಂಖ್ಯೆಯ ಸುಮಾರು ಶೇಕಡಾ 10 ರಷ್ಟು ಇರಲಿದೆ.

ಈ ನಿರ್ಧಾರದ ಹಿಂದಿನ ಅಸಲಿ ಕಾರಣವೇನು ?

ಸಾಮಾನ್ಯವಾಗಿ ಉದ್ಯೋಗ ಕಡಿತಗಳು ಆರ್ಥಿಕ ಕುಸಿತ ಅಥವಾ ಕೃತಕ ಬುದ್ಧಿಮತ್ತೆಯ (AI) ಪ್ರಭಾವದಿಂದ ನಡೆಯುತ್ತವೆ. ಆದರೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರ ತಿಳಿಸಿದಂತೆ, ಕೆಲಸ ಕಡಿತಗೊಳಿಸುವ ಪ್ರಕ್ರಿಯೆಯು ಆರ್ಥಿಕ ಸಂಕಷ್ಟದಿಂದಲ್ಲ, ಬದಲಿಗೆ ಕಂಪನಿಯೊಳಗೆ ಹೆಚ್ಚಾಗಿರುವ ಅಧಿಕಾರಶಾಹಿ (Bureaucracy) ಕಡಿಮೆ ಮಾಡಲು ಕೈಗೊಂಡ ನಿರ್ಧಾರವಾಗಿದೆ. ಕಾಲಾನಂತರದಲ್ಲಿ ಕಂಪನಿಯು ಹಲವಾರು ಪದರಗಳ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ, ಇದು ಕೆಲಸದ ವೇಗವನ್ನು ಕುಂಠಿತಗೊಳಿಸುತ್ತಿದೆ. ನಾವು ಹೆಚ್ಚಿನ ಪದರಗಳನ್ನು ಮತ್ತು ಜನರನ್ನು ಹೊಂದಿದ್ದೇವೆ, ಇದನ್ನು ಸರಳಗೊಳಿಸುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.

ಹೊಡೆತ ಬೀಳಲಿರುವ ಪ್ರಮುಖ ಇಲಾಖೆಗಳು

ಈ ವಜಾ ಪ್ರಕ್ರಿಯೆಯು ಮುಖ್ಯವಾಗಿ ಈ ಕೆಳಗಿನ ವಿಭಾಗಗಳ ಮೇಲೆ ಪರಿಣಾಮ ಬೀರಲಿದೆ:

  1. ಅಮೆಜಾನ್ ವೆಬ್ ಸೇವೆಗಳು (AWS): ಅಮೆಜಾನ್‌ನ ಲಾಭದಾಯಕ ವಿಭಾಗವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇದರ ಬೆಳವಣಿಗೆ ಕುಂಠಿತಗೊಂಡಿರುವುದು ವೆಚ್ಚ ನಿಯಂತ್ರಣಕ್ಕೆ ಪ್ರೇರೇಪಿಸಿದೆ.

  2. ಪ್ರೈಮ್ ವಿಡಿಯೋ ಮತ್ತು ಎಂಟರ್ಟೈನ್‌ಮೆಂಟ್: ಮನರಂಜನಾ ಕ್ಷೇತ್ರದಲ್ಲಿನ ವೆಚ್ಚ ಮತ್ತು ವಿಷಯ ತಂತ್ರಜ್ಞಾನವನ್ನು ಕಂಪನಿ ಮರುಪರಿಶೀಲಿಸುತ್ತಿರುವುದರಿಂದ ಇಲ್ಲಿನ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಲಿದೆ.

  3. ಹೆಚ್‌ಆರ್ ಮತ್ತು ತಂತ್ರಜ್ಞಾನ ತಂಡಗಳು: ಮಾನವ ಸಂಪನ್ಮೂಲ (HR) ಮತ್ತು ಆಂತರಿಕ ತಾಂತ್ರಿಕ ತಂಡಗಳಲ್ಲಿ ಸ್ವಯಂಚಾಲಿತ ಪ್ರಕ್ರಿಯೆಗಳನ್ನು ಅಳವಡಿಸಲು ಕಂಪನಿ ಮುಂದಾಗಿರುವುದು ಈ ಕಡಿತಕ್ಕೆ ಕಾರಣ.

  4. ಚಿಲ್ಲರೆ ವ್ಯಾಪಾರ (Retail): ಇ-ಕಾಮರ್ಸ್ ಬೆಂಬಲ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಲ್ಲೂ ಸುಧಾರಣೆ ತರಲು ಹುದ್ದೆಗಳನ್ನು ಕಡಿತಗೊಳಿಸಲಾಗುತ್ತಿದೆ.

ಉದ್ಯೋಗಿಗಳಲ್ಲಿ ಆತಂಕ

ಕಂಪನಿಯ ಆಂತರಿಕ ವೇದಿಕೆಗಳಾದ ಬ್ಲೈಂಡ್ ಮತ್ತು ರೆಡ್ಡಿಟ್‌ನಲ್ಲಿ ಈಗಾಗಲೇ ಉದ್ಯೋಗಿಗಳು ತಮಗೆ ಸಿಗುತ್ತಿರುವ ಸುಳಿವುಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಕಾರ್ಯಕ್ಷಮತೆ ಸುಧಾರಣಾ ಯೋಜನೆಗಳಲ್ಲಿ (PIP) ಇರುವ ಉದ್ಯೋಗಿಗಳಿಗೆ ಮೊದಲು ಅಧಿಸೂಚನೆ ಹೋಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಕ್ಟೋಬರ್ 2025 ರಲ್ಲಿ ಈಗಾಗಲೇ 14,000 ಹುದ್ದೆಗಳನ್ನು ಕಡಿತಗೊಳಿಸಿದ್ದ ಅಮೆಜಾನ್, ಈಗ ಉಳಿದ ಅರ್ಧದಷ್ಟು ಗುರಿಯನ್ನು ಪೂರೈಸಲು ಮುಂದಾಗಿದೆ.

Exit mobile version