ಚಳಿಗಾಲ (Winter Season) ಆರಂಭವಾದ ಕೂಡಲೇ ದೇಹದ ಮೇಲೆ ಅದರ ಪ್ರಭಾವ ಕಾಣಿಸಿಕೊಳ್ಳುತ್ತದೆ. ಜಲದೋಷ, ಕೆಮ್ಮು, ಜ್ವರ, ಸಂಧಿವಾತದ ನೋವು, ಜೀರ್ಣಕ್ರಿಯೆ ಸಮಸ್ಯೆಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ. ಇಂತಹ ಸಮಯದಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪ ಜಾಗರೂಕತೆ ವಹಿಸಿದರೆ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.
ಚಳಿಗಾಲದಲ್ಲಿ ಹೆಚ್ಚಾಗಿ ಬಳಸುವ ಅರಿಶಿನ, ನೆಲ್ಲಿಕಾಯಿ, ಶುಂಠಿ, ಕಾಳುಮೆಣಸು, ಹಸಿರು ಸೊಪ್ಪುಗಳು ಮತ್ತು ಮಸಾಲೆಗಳು ನಮ್ಮ ದೇಹಕ್ಕೆ ಶಕ್ತಿ, ರೋಗನಿರೋಧಕ ಶಕ್ತಿ ಹಾಗೂ ಉಷ್ಣತೆಯನ್ನು ಒದಗಿಸುತ್ತವೆ. ಆದರೆ ಕೇವಲ ಈ ಆಹಾರಗಳನ್ನು ಸೇವಿಸುವುದೇ ಸಾಕಾಗುವುದಿಲ್ಲ. ಅವುಗಳಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಹೀರಿಕೊಳ್ಳುವಂತೆ ಸೇವಿಸುವ ವಿಧಾನವೂ ಅತ್ಯಂತ ಮುಖ್ಯ.
ಅರಿಶಿನವನ್ನು ಕಾಳುಮೆಣಸಿನ ಜೊತೆ ಸೇವಿಸಿ
ಅರಿಶಿನದಲ್ಲಿರುವ ಪ್ರಮುಖ ಸಂಯುಕ್ತ ಕರ್ಕ್ಯುಮಿನ್ (Curcumin) ಉರಿಯೂತ ನಿವಾರಕ ಮತ್ತು ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್ ಆಗಿದೆ. ಆದರೆ ಇದು ದೇಹಕ್ಕೆ ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಅದಕ್ಕಾಗಿ ಅರಿಶಿನದ ಜೊತೆಗೆ ಒಂದು ಚಿಟಿಕೆ ಕಾಳುಮೆಣಸು ಸೇರಿಸಿ ಸೇವಿಸಿದರೆ, ಅದರಲ್ಲಿ ಇರುವ ಪೈಪರಿನ್ ಅಂಶ ಕರ್ಕ್ಯುಮಿನ್‌ನ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಶೀತ, ಉರಿಯೂತ ಸಮಸ್ಯೆಗಳು ಕಡಿಮೆಯಾಗುತ್ತವೆ.
ಅರಿಶಿನ + ತುಪ್ಪ- ಆರೋಗ್ಯದ ಗುಟ್ಟು
ಅರಿಶಿನವನ್ನು ತುಪ್ಪ, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಸೇವಿಸಿದರೆ ಅದು ಕರುಳಿನ ಮೂಲಕ ರಕ್ತದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಸೇರುತ್ತದೆ. ರಾತ್ರಿ ಹಾಲಿಗೆ ಅರಿಶಿನ ಹಾಕುವಾಗ ಸ್ವಲ್ಪ ತುಪ್ಪ ಸೇರಿಸಿದರೆ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ನೆಲ್ಲಿಕಾಯಿ ಮತ್ತು ಕಾಳುಮೆಣಸಿನ ಸಂಯೋಜನೆ
ನೆಲ್ಲಿಕಾಯಿ ವಿಟಮಿನ್ Cಯ ಭಂಡಾರ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಜೊತೆಗೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಸಹಕಾರಿ. ನೆಲ್ಲಿಕಾಯಿಯನ್ನು ಸ್ವಲ್ಪ ಕಾಳುಮೆಣಸು ಪುಡಿ ಜೊತೆಗೆ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ಶೀತ–ಕೆಮ್ಮಿನ ಸಮಸ್ಯೆಗಳಿಂದ ರಕ್ಷಣೆ ದೊರೆಯುತ್ತದೆ.
ಕಬ್ಬಿಣಾಂಶ ಹೀರಿಕೊಳ್ಳಲು ವಿಟಮಿನ್ C ಅಗತ್ಯ
ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಬಾಜ್ರಾ, ರಾಗಿ ಮುಂತಾದ ಆಹಾರಗಳಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತದೆ. ಆದರೆ ದೇಹಕ್ಕೆ ಅವು ಸಂಪೂರ್ಣವಾಗಿ ಹೀರಿಕೊಳ್ಳಲು ವಿಟಮಿನ್ C ಅಗತ್ಯ. ಅದಕ್ಕಾಗಿ ಈ ಆಹಾರಗಳ ಜೊತೆ ಲಿಂಬೆಹಣ್ಣು ರಸ ಅಥವಾ ನೆಲ್ಲಿಕಾಯಿ ಸೇರಿಸಿ ಸೇವಿಸುವುದು ಉತ್ತಮ.
ಬಿಸಿ ಮಾಡಿ ಸೇವಿಸುವುದರಿಂದ ಲಾಭ ಹೆಚ್ಚಾಗುತ್ತದೆ
ಶುಂಠಿ ಮತ್ತು ಕಾಳುಮೆಣಸನ್ನು ಲಘುವಾಗಿ ಹುರಿದು ಆಹಾರದಲ್ಲಿ ಬಳಸಿದರೆ, ಅವುಗಳಲ್ಲಿ ಇರುವ ಪ್ರಯೋಜನಕಾರಿ ಸಂಯುಕ್ತಗಳು ಹೊರಬಂದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಬಿಸಿ ಆಹಾರ ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚು ಸೂಕ್ತ.
ಜೀರ್ಣಕ್ರಿಯೆಗೆ ಸಹಾಯ ಮಾಡುವ ಮಸಾಲೆಗಳು
ಜೀರಿಗೆ, ಸೋಂಪು ಮತ್ತು ಶುಂಠಿ ಜೀರ್ಣಕಾರಿ ಎಂಜೈಮ್‌ಗಳನ್ನು ಉತ್ತೇಜಿಸುತ್ತವೆ. ಸಾಂಬಾರ್, ಸಾರು ಅಥವಾ ಕಷಾಯದಲ್ಲಿ ಇವುಗಳ ಬಳಕೆ ಆಹಾರದ ಪೋಷಕಾಂಶಗಳು ವ್ಯರ್ಥವಾಗದಂತೆ ನೋಡಿಕೊಳ್ಳುತ್ತದೆ.
ಮೊಸರು ಮತ್ತು ಪ್ರೊಬಯಾಟಿಕ್ಸ್ ಮರೆತರೆ ಬೇಡ
ಮೊಸರು ನಮ್ಮ ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುವ ಪ್ರೊಬಯಾಟಿಕ್ ಆಹಾರ. ಆರೋಗ್ಯಕರ ಕರುಳು ಇದ್ದರೆ ವಿಟಮಿನ್‌ಗಳು ಮತ್ತು ಖನಿಜಗಳು ದೇಹಕ್ಕೆ ಸರಿಯಾಗಿ ಹೀರಿಕೊಳ್ಳುತ್ತವೆ. ಚಳಿಗಾಲದಲ್ಲಿ ಮಧ್ಯಾಹ್ನದ ಊಟಕ್ಕೆ ಮೊಸರು ಸೇರಿಸುವುದು ಉತ್ತಮ.
