ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಅನೇಕರು ನೆಗಡಿ, ಕೆಮ್ಮು, ಗಂಟಲು ಕೆರೆತ, ಮೂಗು ಸೋರುವುದು, ಜ್ವರದಂತಹ ಸಮಸ್ಯೆಗಳಿಂದ ಬಳಲು ಆರಂಭಿಸುತ್ತಾರೆ. ವಿಶೇಷವಾಗಿ ಬೆಳಿಗ್ಗೆ ಎದ್ದ ಕೂಡಲೇ ಈ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಇದಕ್ಕೆ ರೋಗನಿರೋಧಕ ಶಕ್ತಿ ಕಡಿಮೆಯೇ ಕಾರಣ ಎಂದು ಭಾವಿಸಲಾಗುತ್ತದೆ. ಆದರೆ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಪದೇಪದೇ ಸೋಂಕು ಕಾಣಿಸಿಕೊಳ್ಳಲು ನಮ್ಮ ದೈನಂದಿನ ಜೀವನಶೈಲಿಯಲ್ಲಿ ನಾವು ಮಾಡುವ ಕೆಲವು ತಪ್ಪುಗಳೇ ಪ್ರಮುಖ ಕಾರಣವಾಗಿವೆ.
ಚಳಿಯ ವಾತಾವರಣ, ಕಡಿಮೆ ತಾಪಮಾನ, ಶುಷ್ಕ ಗಾಳಿ ಮತ್ತು ಒಳಾಂಗಣ ಚಟುವಟಿಕೆಗಳ ಹೆಚ್ಚಳ ಇವು ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಇದರಿಂದ ವೈರಸ್‌ಗಳು ಸುಲಭವಾಗಿ ದೇಹ ಪ್ರವೇಶಿಸುತ್ತವೆ.
▪️ ಒಳಾಂಗಣ ಗಾಳಿ ಮತ್ತು ಹೀಟರ್ ಬಳಕೆ
ಚಳಿಗಾಲದಲ್ಲಿ ಹೀಟರ್, ರೂಮ್ ಬ್ಲೋವರ್‌ಗಳ ಅತಿಯಾದ ಬಳಕೆ ಒಳಾಂಗಣ ಗಾಳಿಯನ್ನು ತುಂಬಾ ಒಣಗಿಸುತ್ತದೆ. ಇದರಿಂದ ಮೂಗಿನೊಳಗಿನ ಲೋಳೆಪೊರೆ ಒಣಗಿ ಹೋಗುತ್ತದೆ. ಈ ಲೋಳೆಯೇ ವೈರಸ್‌ಗಳನ್ನು ತಡೆಯುವ ಮೊದಲ ರಕ್ಷಣಾ ಪದರ. ಅದು ಹಾನಿಯಾದಾಗ ವೈರಸ್‌ಗಳು ಸುಲಭವಾಗಿ ಉಸಿರಾಟದ ಮೂಲಕ ದೇಹಕ್ಕೆ ಪ್ರವೇಶಿಸುತ್ತವೆ.
▪️ ಕೈ ತೊಳೆಯುವ ಅಭ್ಯಾಸ ಕಡಿಮೆಯಾಗುವುದು
ಚಳಿಯ ಕಾರಣಕ್ಕೆ ಅನೇಕರು ಕೈ ತೊಳೆಯುವುದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಕಚೇರಿಯ ಡೆಸ್ಕ್, ಲಿಫ್ಟ್ ಬಟನ್, ಮೊಬೈಲ್ ಫೋನ್, ಸಾರ್ವಜನಿಕ ಸಾರಿಗೆ ಮೂಲಕ ವೈರಸ್‌ಗಳು ಕೈಗೆ ಅಂಟಿಕೊಳ್ಳುತ್ತವೆ. ಕೈ ತೊಳೆಯದೆ ಮುಖ, ಮೂಗು ಮುಟ್ಟಿದರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚುತ್ತದೆ. ನಿಯಮಿತವಾಗಿ ಕೈ ತೊಳೆಯುವುದು ಶೀತ-ನೆಗಡಿಯನ್ನು ತಡೆಯುವ ಅತ್ಯಂತ ಸರಳ ಮಾರ್ಗ.
▪️ ನಿದ್ದೆಯ ಕೊರತೆ
ಬ್ಯುಸಿ ಜೀವನಶೈಲಿಯಿಂದ ನಿದ್ದೆಗೆ ಕಡಿಮೆ ಸಮಯ ಮೀಸಲಿಡುವುದು ಸಾಮಾನ್ಯವಾಗಿದೆ. ಆದರೆ ದಿನಕ್ಕೆ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಇದರಿಂದ ವೈರಲ್ ಸೋಂಕುಗಳಿಗೆ ಬೇಗ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ.
▪️ ಕಿಟಕಿ-ಬಾಗಿಲುಗಳನ್ನು ಸಂಪೂರ್ಣ ಮುಚ್ಚುವುದು
ಚಳಿಯಿಂದ ರಕ್ಷಿಸಿಕೊಳ್ಳಲು ಮನೆಗಳನ್ನು ಸಂಪೂರ್ಣವಾಗಿ ಮುಚ್ಚಿಟ್ಟರೆ ಗಾಳಿಯ ಹರಿವು ಕಡಿಮೆಯಾಗುತ್ತದೆ. ಇದರಿಂದ ಮನೆಯೊಳಗೆ ವೈರಸ್‌ಗಳು ಹೆಚ್ಚು ಸಮಯ ಉಳಿದುಕೊಳ್ಳುತ್ತವೆ. ದಿನಕ್ಕೆ ಕನಿಷ್ಠ ಕೆಲ ಸಮಯ ಕಿಟಕಿಗಳನ್ನು ತೆರೆಯುವುದರಿಂದ ತಾಜಾ ಗಾಳಿ ಒಳಬಂದು ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
▪️ ವಿಟಮಿನ್ ಡಿ ಕೊರತೆ
ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಸಿಗುವುದರಿಂದ ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದ ಶೀತ, ಕೆಮ್ಮು ಸೇರಿದಂತೆ ಉಸಿರಾಟದ ಸೋಂಕುಗಳು ಹೆಚ್ಚಾಗುತ್ತವೆ.
▪️ ಹಳೆಯ ಕರ್ಚೀಫ್ ಮತ್ತು ಟವೆಲ್ ಬಳಕೆ
ನೆಗಡಿ ಅಥವಾ ಕೆಮ್ಮಿನ ಸಮಯದಲ್ಲಿ ಬಳಸಿದ ಕರ್ಚೀಫ್‌ಗಳು ಹಾಗೂ ಟವೆಲ್‌ಗಳನ್ನು ತೊಳೆಯದೆ ಮರುಬಳಕೆ ಮಾಡುವುದು ಅಪಾಯಕಾರಿ. ಇವುಗಳಲ್ಲಿ ವೈರಸ್‌ಗಳು ಉಳಿದು ಮತ್ತೆ ದೇಹಕ್ಕೆ ಹರಡುವ ಸಾಧ್ಯತೆ ಇರುತ್ತದೆ.
▪️ ಪೌಷ್ಟಿಕ ಆಹಾರದ ಕೊರತೆ
ಚಳಿಗಾಲದಲ್ಲಿ ಜಂಕ್ ಫುಡ್ ಸೇವನೆ ಹೆಚ್ಚಾಗುತ್ತದೆ. ಹಣ್ಣು, ತರಕಾರಿ, ಬಿಸಿ ಆಹಾರವನ್ನು ಕಡೆಗಣಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಇದರಿಂದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ.
▪️ ಅತಿಯಾಗಿ ಅಥವಾ ಸಂಪೂರ್ಣವಾಗಿ ವ್ಯಾಯಾಮ ಬಿಡುವುದು
ಅತಿಯಾದ ಚಳಿಯಿಂದ ವ್ಯಾಯಾಮ ಬಿಡುವುದು ಅಥವಾ ವಿಶ್ರಾಂತಿ ಇಲ್ಲದೆ ಅತಿಯಾಗಿ ವ್ಯಾಯಾಮ ಮಾಡುವುದು. ಎರಡೂ ಆರೋಗ್ಯಕ್ಕೆ ಹಾನಿಕಾರಕ. ಮಧ್ಯಮ ಪ್ರಮಾಣದ ವ್ಯಾಯಾಮವೇ ರೋಗನಿರೋಧಕ ಶಕ್ತಿಗೆ ಉತ್ತಮ.
▪️ ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್ ಸೇವನೆ
ನೆಗಡಿ-ಕೆಮ್ಮು ಸಾಮಾನ್ಯವಾಗಿ ವೈರಸ್‌ನಿಂದ ಉಂಟಾಗುತ್ತದೆ. ಆದರೆ ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್ ಸೇವಿಸುವುದು ದೇಹಕ್ಕೆ ಹಾನಿ ಮಾಡಬಹುದು ಮತ್ತು ಭವಿಷ್ಯದಲ್ಲಿ ಔಷಧ ಪ್ರತಿರೋಧವನ್ನು ಹೆಚ್ಚಿಸಬಹುದು.
