ಚಳಿಗಾಲದಲ್ಲಿ ನಿಮ್ಮ ಆಹಾರಾಭ್ಯಾಸ ಹೀಗಿರಲಿ!: ಏನು ತಿನ್ನಬೇಕು, ಏನು ತಿನ್ನಬಾರದು?

Untitled design 2025 11 07t073222.732

ಚಳಿಗಾಲ ಆರಂಭವಾದರೆ ಶೀತ, ಕೆಮ್ಮು, ಜ್ವರ ಇವು ಸಾಮಾನ್ಯ. ಆದರೆ ಸರಿಯಾದ ಆಹಾರ ಅಭ್ಯಾಸಗಳಿಂದ ಈ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ತಡೆಗಟ್ಟಬಹುದು. ಚಳಿಗಾಲದ ವೇಳೆ ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸಲು ಶಕ್ತಿದಾಯಕ, ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ.

ಹಸಿರು ತರಕಾರಿಗಳು

ಊಟದಲ್ಲಿ ಹಸಿರು ತರಕಾರಿಗಳು ಬಳಸಿ. ಮೆಂತೆ, ಪಾಲಕ್‌, ದಂಟು, ಹೊನಗನ್ನೆ, ಕ್ಯಾಪ್ಸಿಕಂ, ಬೆಂಡೆಕಾಯಿ, ಬ್ರೊಕೊಲಿ ಮುಂತಾದ ತರಕಾರಿಗಳು ಚಳಿಗಾಲದ ಶ್ರೇಷ್ಠ ಆಹಾರ. ಇವುಗಳಲ್ಲಿ ಬೀಟಾ ಕ್ಯಾರೋಟಿನ್, ಕಬ್ಬಿಣ, ಫೋಲೇಟ್ ಮುಂತಾದ ಅಂಶಗಳು ಹೇರಳವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಹಸಿರು ತರಕಾರಿಗಳಲ್ಲಿರುವ ನಾರು (ಫೈಬರ್) ಜೀರ್ಣಕ್ರಿಯೆ ಸುಗಮಗೊಳಿಸಿ, ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.

ಬೇರು-ಗಡ್ಡೆ-ಗೆಣಸುಗಳು

ಚಳಿಗಾಲ ಎಂದರೆ ಗಡ್ಡೆ ತರಕಾರಿಗಳ ಕಾಲ. ಬೀಟ್‌ರೂಟ್‌, ಕ್ಯಾರೆಟ್‌, ಗೆಣಸು, ಶುಂಠಿ, ಟರ್ನಿಪ್‌ ಮುಂತಾದವುಗಳಲ್ಲಿ ವಿಟಮಿನ್‌ ಎ, ಬೀಟಾ ಕ್ಯಾರೋಟಿನ್‌ ಅಧಿಕವಾಗಿದೆ. ಗೆಣಸು ಸಿಪ್ಪೆ ಸಮೇತ ತಿನ್ನುವುದರಿಂದ ಹೆಚ್ಚು ಪೋಷಕಾಂಶ ದೊರೆಯುತ್ತದೆ. ಇವುಗಳಲ್ಲಿ ಕ್ಯಾಲರಿ ಸ್ವಲ್ಪ ಹೆಚ್ಚಾದರೂ ಚಳಿಗಾಲದಲ್ಲಿ ದೇಹಕ್ಕೆ ತಾಪಮಾನ ಕಾಯ್ದುಕೊಳ್ಳಲು ಇದು ಸಹಾಯಕ. ಪೌಷ್ಟಿಕಾಂಶಯುಕ್ತ ಈ ತರಕಾರಿಗಳು ಚಳಿ ಗಾಲದಲ್ಲಿ ಶಕ್ತಿ ಮತ್ತು ಉತ್ಸಾಹ ನೀಡುತ್ತವೆ.

ಇಡೀ ಧಾನ್ಯಗಳು 

ಜೋಳ, ಸಜ್ಜೆ, ರಾಗಿ ಮುಂತಾದ ಸಿರಿ ಧಾನ್ಯಗಳು ಚಳಿಗಾಲದಲ್ಲಿ ಆರೋಗ್ಯಕ್ಕೆ ಮುಖ್ಯವಾಗಿದೆ. ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಂಡು ದೀರ್ಘಕಾಲ ಶಕ್ತಿಯನ್ನು ನೀಡುತ್ತವೆ.. ಇಡೀ ಧಾನ್ಯಗಳ ಸೇವನೆಯಿಂದ ಹೃದಯ ರೋಗ, ಮಧುಮೇಹ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ತಡೆಯಬಹುದು. ದೇಹದ ಒಳಗೆ ಉತ್ತಮ ಬ್ಯಾಕ್ಟೀರಿಯಗಳ ವೃದ್ಧಿಗೂ ಇವು ಸಹಕಾರಿ.

ಬೀಜ ಮತ್ತು ಕಾಯಿಗಳು

ಬಾದಾಮಿ, ವಾಲ್‌ನಟ್‌, ಸೂರ್ಯಕಾಂತಿ, ಕುಂಬಳಕಾಯಿ ಮತ್ತು ಅಗಸೆ ಬೀಜಗಳು ಚಳಿಗಾಲದ ಸೂಪರ್‌ಫುಡ್‌. ಇವುಗಳಲ್ಲಿ ಉತ್ತಮ ಕೊಬ್ಬು, ಪ್ರೊಟೀನ್, ವಿಟಮಿನ್‌ ಇ, ಮೆಗ್ನೀಶಿಯಂ, ಫೋಲೇಟ್ ಮುಂತಾದ ಅಂಶಗಳು ಸಮೃದ್ಧವಾಗಿದೆ.
ಕೊಬ್ಬಿನ ಪ್ರಮಾಣ ಇದ್ದರೂ ಇವುಗಳಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಕಡಿಮೆ. ದಿನನಿತ್ಯ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹೃದಯ ಆರೋಗ್ಯಕ್ಕೂ ಚರ್ಮದ ಹೊಳಪಿಗೂ ಸಹಾಯ ಮಾಡುತ್ತವೆ.

ಸಾಂಬಾರ ಪದಾರ್ಥಗಳು

ಚಳಿ ಸಮಯದಲ್ಲಿ ಮಸಾಲೆಗಳು ಕೇವಲ ರುಚಿಗಲ್ಲ, ಆರೋಗ್ಯಕ್ಕೂ ಉಪಕಾರಿಗಳು. ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಏಲಕ್ಕಿ, ಅರಿಶಿನ ಮುಂತಾದವು ಉತ್ಕರ್ಷಣ ನಿರೋಧಕಗಳು (antioxidants) ಆಗಿ ಕೆಲಸಮಾಡುತ್ತವೆ.
ಅರಿಶಿನವು ರೋಗನಿರೋಧಕ ಶಕ್ತಿ ಹೆಚ್ಚಿಸಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಚಕ್ಕೆ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಶುಂಠಿ ಜೀರ್ಣ ಕ್ರಿಯೆ ಸುಗಮಗೊಳಿಸಿ ಶೀತ ನಿವಾರಣೆ ಮಾಡುತ್ತದೆ.

ಚಳಿ ಗೆಲ್ಲುವ ಸರಳ ಆಹಾರ ನಿಯಮ

ಈ ಸರಳ ಅಭ್ಯಾಸಗಳಿಂದ ಶೀತ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳು ದೂರವಾಗುತ್ತವೆ. ದೇಹದ ತಾಪಮಾನ ಸಮತೋಲನದಲ್ಲಿರುತ್ತದೆ ಮತ್ತು ಚಳಿಗಾಲವೂ ಆರೋಗ್ಯಕರವಾಗಿ ಕಳೆಯಬಹುದು.

Exit mobile version