ಇತ್ತೀಚಿನ ಒತ್ತಡದ ಜೀವನಶೈಲಿ, ತಡವಾಗಿ ಮಲಗುವುದು ಮತ್ತು ದೀರ್ಘಕಾಲ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯನ್ನು ನೋಡುವುದರಿಂದ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ಸ್ (Dark Circles) ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕೆಮಿಕಲ್ ಯುಕ್ತ ಕ್ರೀಮ್‌ಗಳಿಗಿಂತ ಅಡುಗೆ ಮನೆಯಲ್ಲಿರುವ ಆಲೂಗಡ್ಡೆ ಹೆಚ್ಚು ಪರಿಣಾಮಕಾರಿ ಎಂಬುದು ನಿಮಗೆ ಗೊತ್ತೇ ? ಆಲೂಗಡ್ಡೆ ಕೇವಲ ಅಡುಗೆಗಷ್ಟೇ ಅಲ್ಲ, ಸೌಂದರ್ಯ ವರ್ಧಕವಾಗಿಯೂ ಅದ್ಭುತವಾಗಿ ಕೆಲಸ ಮಾಡುತ್ತದೆ.
ನೈಸರ್ಗಿಕ ಬ್ಲೀಚಿಂಗ್ ಏಜೆಂಟ್
ಆಲೂಗಡ್ಡೆ ರಸವು ಚರ್ಮಕ್ಕೆ ನೈಸರ್ಗಿಕ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಆಲೂಗಡ್ಡೆ ರಸವನ್ನು ನಿಯಮಿತವಾಗಿ ಫೇಸ್ ಮಾಸ್ಕ್ ಆಗಿ ಬಳಸುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗಿ, ತ್ವಚೆಯು ಫಳಫಳ ಹೊಳೆಯುತ್ತದೆ.
ಕಣ್ಣಿನ ಕೆಳಗಿನ ಕಪ್ಪು ವರ್ತುಲ ಮತ್ತು ಊತವನ್ನು ಕಡಿಮೆ ಮಾಡಲು ಆಲೂಗಡ್ಡೆ ರಸವನ್ನು ಕಾಟನ್ ಪ್ಯಾಡ್‌ಗೆ ಹಚ್ಚಿ ಕಣ್ಣುಗಳ ಮೇಲೆ ಇರಿಸಿ. 10 ರಿಂದ 15 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಕೆಲವು ದಿನಗಳ ಕಾಲ ಹೀಗೆ ಮಾಡುವುದರಿಂದ ಕಣ್ಣಿನ ಕೆಳಗಿನ ಚರ್ಮವು ತಾಜಾತನವನ್ನು ಪಡೆಯುತ್ತದೆ ಮತ್ತು ಕಪ್ಪು ಬಣ್ಣ ಮಾಯವಾಗುತ್ತದೆ.
ನಿಮ್ಮ ಚರ್ಮವು ಅತಿಯಾದ ಎಣ್ಣೆಯುಕ್ತವಾಗಿದ್ದರೆ ಅಥವಾ ಪದೇ ಪದೇ ಮೊಡವೆಗಳು ಕಾಡುತ್ತಿದ್ದರೆ ಆಲೂಗಡ್ಡೆ ರಸವು ಉತ್ತಮ ಆಯ್ಕೆ. ಇದು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಿ, ಹೆಚ್ಚುವರಿ ಎಣ್ಣೆಯ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದರಿಂದ ಮೊಡವೆಗಳ ಸಾಧ್ಯತೆ ಕಡಿಮೆಯಾಗುತ್ತದೆ.
ಬಿಸಿಲಿನಲ್ಲಿ ತಿರುಗಾಡುವುದರಿಂದ ಉಂಟಾಗುವ ಕೆಂಪು ಕಲೆಗಳು ಮತ್ತು ಸನ್ ಟ್ಯಾನ್ ನಿವಾರಣೆಗೆ ಆಲೂಗಡ್ಡೆ ರಸದ ತಂಪಾಗಿಸುವ ಗುಣ ಸಹಕಾರಿ. ಅಷ್ಟೇ ಅಲ್ಲ, ಆಲೂಗಡ್ಡೆ ರಸವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ನೆತ್ತಿಯ ಶುಷ್ಕತೆ ಮತ್ತು ತಲೆಹೊಟ್ಟು ನಿವಾರಣೆಯಾಗುತ್ತದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಸೂಚನೆ: ಯಾವುದೇ ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಮುನ್ನ ತ್ವಚೆಯ ಒಂದು ಸಣ್ಣ ಭಾಗದಲ್ಲಿ ಪ್ಯಾಚ್ ಟೆಸ್ಟ್ ಮಾಡುವುದು ಉತ್ತಮ.
